IPL 2023: ವಿಕೆಟ್ ನಡುವಿನ ಅತ್ಯುತ್ತಮ ಹಾಗೂ ಕೆಟ್ಟ ಓಟಗಾರರನ್ನು ಹೆಸರಿಸಿದ ವಿರಾಟ್ ಕೊಹ್ಲಿ!
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಪ್ರಸ್ತುತ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಿದ್ದು ಬುಧವಾರ ನಡೆಯಲಿರುವ ಅಂತಿಮ ಏಕದಿನ ಪಂದ್ಯದ ಬಳಿಕ ಎಲ್ಲರ ಚಿತ್ತ ಐಪಿಎಲ್ ಟೂರ್ನಿಯತ್ತ ನೆಟ್ಟಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಹಾಗೂ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದು ಕೆಲ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾನು ಆಡಿರುವ ಆಟಗಾರರ ಪೈಕಿ ವಿಕೆಟ್‌ಗಳ ಮಧ್ಯೆ ಅತ್ಯುತ್ತಮ ಓಟಗಾರರನ್ನು ಹೆಸರಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ವಿಕೆಟ್ ನಡುವಿನ ಅತ್ಯುತ್ತಮ ಓಟಗಾರರು ಎಂದಿದ್ದಾರೆ ವಿರಾಟ್ ಕೊಹ್ಲಿ. ಇದೇ ಸಂದರ್ಭದಲ್ಲಿ ಅವರು ತಮಾಷೆಯಾಗಿ ಚೇತೇಶ್ವರ್ ಪೂಜಾರ ನಾನು ಆಡಿರುವ ಆಟಗಾರರ ಪೈಕಿ ಕೆಟ್ಟ ಓಟಗಾರ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಜೊತೆಗೆ '360 ಶೋ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್ ಹಾಗೂ ವೈಯಕ್ತಿಕ ವಿಚಾರವಾಗಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಬಿಡಿ ಹಾಗೂ ಎಂಎಸ್ ಧೋನಿ ಅವರೊಂದಿಗೆ ಆಡುತ್ತಿರುವಾಗ ಓಟಕ್ಕಾಗಿ ಕರೆ ನೀಡುವ ಅಗತ್ಯವೂ ಇಲ್ಲ ಎಂಬುದನ್ನು ವಿವರಿಸಿದ್ದಾರೆ ವಿರಾಟ್ ಕೊಹ್ಲಿ.
"ನನಗೆ ಈ ಹಿಂದೆಯೂ ಈ ಪ್ರಶ್ನೆ ಎದುರಾಗಿತ್ತು. ವಿಕೆಟ್‌ಗಳ ಮಧ್ಯೆ ಓಡುವಾಗ ಎಬಿ ಡಿವಿಲಿಯರ್ಸ್ ಅತ್ಯಂತ ವೇಗವಾಗಿ ಓಡುವ ಆಟಗಾರನಾಗಿದ್ದಾರೆ. ಅವರನ್ನು ಬಿಟ್ಟರೆ ವಿಕೆಟ್‌ಗಳ ನಡುವಿನ ಓಟದಲ್ಲಿ ಅತ್ಯುತ್ತಮ ಹೊಂದಾಣಿಕೆಯಿದ್ದ ಮತ್ತೋರ್ವ ಆಟಗಾರ ಎಂದರೆ ಅದು ಎಂಎಸ್ ಧೋನಿ. ವೇಗದ ವಿಚಾರವಾಗಿ ನನಗೆ ಗೊತ್ತಿಲ್ಲ. ಆದರೆ ಎಂಎಸ್ ಧೋನಿ ಜೊತೆಗೆ ಓಡುವಾಗ ನಾನು ಓಟಕ್ಕಾಗಿ ಕರೆ ನೀಡಬೇಕಾಗಿಲ್ಲ" ಎಂದು ವಿವರಿಸಿದ್ದಾರೆ ವಿರಾಟ್ ಕೊಹ್ಲಿ.
ಇನ್ನು ಇದೇ ಸಂದರ್ಭದಲ್ಲಿ ವಿಕೆಟ್‌ಗಳ ಮಧ್ಯೆ ಕೆಟ್ಟ ಓಟಗಾರನ ಬಗ್ಗೆಯೂ ವಿರಾಟ್ ಕೊಹ್ಲಿಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಅವರನ್ನು ತಮಾಷೆಯಾಗಿ ಹೆಸರಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆದಿದ್ದ ತಮಾಷೆಯ ಪ್ರಸಂಗವೊಂದನ್ನು ವಿವರಿಸಿದ್ದಾರೆ ವಿರಾಟ್ ಕೊಹ್ಲಿ. ಆ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸಹ ಆಟಗಾರ ರನೌಟ್ ಆಗಲು ಪೂಜಾರ ಕಾರಣವಾಗಿದ್ದರು. ಅದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವತಃ ಪೂಜಾರ ಅವರೇ ರನೌಟ್‌ಗೆ ಬಲಿಯಾಗಿದ್ದರು ಎಂಬುದನ್ನು ತಮಾಷೆಯಾಗಿ ವಿವರಿಸಿದ್ದಾರೆ ವಿರಾಟ್ ಕೊಹ್ಲಿ.
ಇನ್ನು ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಆರ್‌ಸಿಬಿ ಮಾರ್ಚ್ 26 ಭಾನುವಾರದಂದು ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಬೆಂಗಳುರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸಿಂಗ್ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡದ ಮಾಜಿ ಆಟಗಾರರಾದ ದಿಗ್ಗಜ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಕೂಡ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಆವೃತ್ತಿಯ ಜರ್ಸಿಯ ಅನಾವರಣವೂ ಆಗಲಿದೆ.












Click it and Unblock the Notifications