ವೆಸ್ಟ್ ಇಂಡೀಸ್ ಅಂತಿಮ ಓವರ್ ನಲ್ಲಿ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ
ಏಕದಿನ ಪಂದ್ಯಗಳೆಂದರೆ ಈಗೀಗ ಆಗಲೇ ಬೋರ್ ಎನಿಸುವ ಮಾತುಗಳು ಕೇಳಿಬರುತ್ತಿದೆ. ಆದರೆ ಶುಕ್ರವಾರ ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಏಕದಿನ ಪಂದ್ಯ ಮಾತ್ರ ಇದಕ್ಕೆ ಅಪವಾದ ಎನ್ನುವಂತೆ ರೋಮಾಂಚನಕಾರಿಯಾಗಿ ಕೊನೆಯಾಗಿದೆ. ಯಾರು ಗೆಲ್ಲುತ್ತಾರೆ ಎನ್ನುವುದು ಮಾತ್ರ ಕೊನೆಯ ಎಸೆತದವರೆಗೂ ಯಾರಿಗೂ ಅಂದಾಜು ಮಾಡಲು ಸಾಧ್ಯವಾಗಿರಲಿಲ್ಲ. ಅಂತಿಮ ಬಾಲ್‌ನಲ್ಲಿ ಮ್ಯಾಜಿಕ್ ಮಾಡಿದ ಭಾರತದ ಮೊಹಮ್ಮದ್ ಸಿರಾಜ್ ಭಾರತಕ್ಕೆ 3 ರನ್‌ಗಳ ರೋಚಕ ಜಯ ತಂದುಕೊಟ್ಟರು.
ವೆಸ್ಟ್ ವಿಂಡೀಸ್‌ನ ಟ್ರಿನಿಡಾಡ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯ ಅತ್ಯುತ್ತಮ ಏಕದಿನ ಪಂದ್ಯಗಳಲ್ಲಿ ಒಂದೆನಿಸಿಕೊಂಡಿದೆ. ಎರಡೂ ತಂಡಗಳ ಸಮಬಲದ ಹೋರಾಟ ನಡೆಸಿದ್ದು ಮಾತ್ರ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.
ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಸ್ಪೋಟಕ ಆಟವಾಡಿದರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 308 ರನ್ ಕಲೆಹಾಕಿತು.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬ್ಯಾಟರ್ ಪ್ರಾಬಲ್ಯ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಶ್ರಾಂತಿಯ ನಡುವೆಯೂ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಆಡುವ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಶುಭಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಆಡುವ ಬಳಗದಲ್ಲಿ ಸ್ಥಾನ ಪಡೆದರು. ಒಂದೂವರೆ ವರ್ಷದ ಬಳಿಕ ಏಕದಿನ ಪಂದ್ಯವನ್ನಾಡಿದ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 64 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಗಿಲ್ ರನೌಟ್‌ಗೆ ಬಲಿಯಾದರು. ನಂತರ ಬಂದ ಶ್ರೇಯಸ್ ಅಯ್ಯರ್ ಅರ್ಧ ಶತಕ ಗಳಿಸಿದರು, ನಾಯಕ ಧವನ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ದೀಪಕ್ ಹೂಡಾ 27, ಅಕ್ಷರ್ ಪಟೇಲ್ 21 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ಬ್ಯಾಟರ್ ಗಳ ಹೋರಾಟ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆತಿಥೇಯರು ಆಕ್ರಮಣಕಾರಿ ಆಟಕ್ಕೆ ಮುಂದಾದರು, ತಂಡದ ಮೊತ್ತ 16 ರನ್ ಇರುವಾಗಲೇ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಬಿರುಸಿನ ಆಟವಾಡಿದರು. 68 ಎಸೆತಗಳಲ್ಲಿ 75 ರನ್ ಕಲೆ ಹಾಕುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಂತೆ ಮಾಡಿದರು. ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಾಹಲ್ ವಿಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ರಂತಹ ಅನುಭವಿ ಬೌಲರ್ ಗಳ ಅನುಪಸ್ಥಿತಿಯ ನಡುವೆಯೂ ಭಾರತದ ಬೌಲಿಂಗ್ ಪ್ರದರ್ಶನ ಉತ್ತಮವಾಗಿತ್ತು.

ಅಂತಿಮ ಓವರ್ ನಲ್ಲಿ ಜಯ ತಂದುಕೊಟ್ಟ ಸಿರಾಜ್
ಕೊನೆಯ ಮೂರು ಓವರ್ ಗಳಲ್ಲಿ ವೆಸ್ಟ್ ಇಂಡೀಸ್‌ಗೆ 38 ರನ್ ಅವಶ್ಯಕತೆ ಇತ್ತು ಈ ವೇಳೆ ಆಕ್ರಮಣಕಾರಿ ಆಟವಾಡಿದ ರೊಮಾರಿಯೋ ಶೆಫರ್ಡ್ ಮತ್ತು ಅಕೀಲ್ ಹುಸೇನ್ 48ನೇ ಓವರ್ ನಲ್ಲಿ 11 ರನ್ ಗಳಿಸಿದರು. 49ನೇ ಓವರ್ ನಲ್ಲಿ ಪ್ರಸಿದ್ ಕೃಷ್ಣ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಮೂಲಕ 12 ರನ್ ಗಳಿಸಿದ ವೆಸ್ಟ್ ಇಂಡೀಸ್ ಅಂತಿಮ ಓವರ್ ನಲ್ಲಿ 15 ರನ್‌ಗಳ ಅಗತ್ಯವಿತ್ತು. ಮೊದಲ ಐದು ಬಾಲ್‌ಗಳಲ್ಲಿ 10 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ಅಂತಿಮ ಬಾಲ್‌ನಲ್ಲಿ ಬೌಂಡರಿ ಗಳಿಸಿದರೆ ಪಂದ್ಯ ಟೈ ಆಗುತ್ತಿತ್ತು. ಆರು ರನ್ ಗಳಿಸಿದರೆ ಜಯ ಸಾಧಿಸುತ್ತಿತ್ತು, ಆದರೆ ಕೊನೆಯ ಬಾಲ್‌ನಲ್ಲಿ ಮ್ಯಾಜಿಕ್ ಮಾಡಿದ ಮೊಹಮ್ಮದ್ ಸಿರಾಜ್ ಒತ್ತಡದ ನಡುವೆ ಉತ್ತಮ ಬೌಲಿಂಗ್ ಮಾಡಿ ಕೇವಲ ಒಂದು ರನ್ ನೀಡಿದರು. ಇದರೊಂದಿಗೆ ಟೀಂ ಇಂಡಿಯಾ 3 ರನ್‌ಗಳ ರೋಚಕ ಜಯ ಸಾಧಿಸಿತು.

ಇನ್ನೂ ಸುಧಾರಣೆಯಾಗಬೇಕು ಎಂದ ಧವನ್
ಪಂದ್ಯದ ಗೆಲುವಿನ ನಂತರ ಮಾತನಾಡಿದ ಶಿಖರ್ ಧವನ್, ಪಂದ್ಯ ಅಂತಿಮ ಓವರ್ ವರೆಗೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಅಂತಿಮವಾಗಿ ಒತ್ತಡಕ್ಕೆ ಸಿಲುಕಿದೆವು ಎಂದು ಹೇಳಿದರು. ನಾವು ಇನ್ನೂ ನಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಬಾಂಗ್ಲಾ -ವೆಸ್ಟ್ ಇಂಡೀಸ್ ನಡುವೆ ನಡೆದ ಸರಣಿಯಲ್ಲಿ ಕಡಿಮೆ ಮೊತ್ತಕ್ಕೆ ವೆಸ್ಟ್ ಇಂಡೀಸ್ ಆಲೌಟ್ ಆಗಿದ್ದನ್ನು ನೋಡಿ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ತಂಡವನ್ನು ಹಗುರವಾಗಿ ಪರಿಗಣಿಸಿದಂತಿತ್ತು. ಆದರೆ ವೆಸ್ಟ್ ಇಂಡೀಸ್ ಉತ್ತಮ ಪ್ರದರ್ಶನ ನೀಡಿದರು. ಭಾರತ ಫೀಲ್ಡಿಂಗ್ ನಲ್ಲಿ ಕೆಲವು ತಪ್ಪು ಮಾಡಿದರೆ, 20 ಹೆಚ್ಚುವರಿ ರನ್ ಬಿಟ್ಟುಕೊಟ್ಟಿದ್ದು ದುಬಾರಿಯಾಯಿತು.












Click it and Unblock the Notifications