RCB vs PBKS: ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ; ಪಂದ್ಯದ ಸಮಯ, ಪ್ಲೇಯಿಂಗ್ ಇಲೆವೆನ್
ಐಪಿಎಲ್ 2025ರ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿರುವ ಆರ್ ಸಿಬಿ ತವರಿನಲ್ಲಿ ಮೂರು ಪಂದ್ಯಗಳನ್ನು ಸೋಲುವ ಮೂಲಕ ಹಿನ್ನಡೆ ಅನುಭವಿಸಿದೆ. ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ಆರ್ ಸಿಬಿ ಮುಂದಿನ ಪಂದ್ಯದಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧವೇ ಸೆಣೆಸಲಿದೆ. ಆದರೆ ಈ ಪಂದ್ಯ ಚಂಢೀಗಢ ಮುಲ್ಲನ್‌ಪುರದಲ್ಲಿ ನಡೆಯಲಿದೆ.
ಆರ್ ಸಿಬಿ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಮೂರು ಪಂದ್ಯಗಳು ತವರಿನಲ್ಲಿ ನಡೆದಿದ್ದು ಸೋಲು ಕಂಡರೆ, ತವರಿನ ಹೊರಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾನುವಾರ ನಡೆಯಲಿರುವ ಪಂದ್ಯ ಕೂಡ ತವರಿನ ಹೊರಗೆ ನಡೆಯುತ್ತಿದ್ದು ಬೆಂಗಳೂರು ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಆರ್ ಸಿಬಿ ತಂಡದಲ್ಲಿ ಎರಡು ಬದಲಾವಣೆ
ಶುಕ್ರವಾರ ನಡೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಬದಲಾಗಿ ಮನೋಜ್ ಭಾಂಡಗೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದರು. ಆದರೆ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಭಾನುವಾರ ನಡೆಯುವ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ವಾಪಸಾತಿ ಮಾಡಲಿದ್ದಾರೆ.
7 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಭಾನುವಾರ ನಡೆಯುವ ಪಂದ್ಯದಲ್ಲಿ ಬೆಂಚ್ ಕಾಯುವ ಸಾಧ್ಯತೆ ಇದೆ. ಅವರ ಬದಲಾಗಿ ಇಂಗ್ಲೆಂಡ್‌ನ ಮತ್ತೊಬ್ಬ ಸ್ಪೋಟಕ ಆಲ್‌ರೌಂಡರ್ ಜೇಕಬ್ ಬೆಥೆಲ್ ಆಡುವ ಸಾಧ್ಯತೆ ಇದೆ. ಅಥವಾ ವೆಸ್ಟ್ ಇಂಡೀಸ್‌ನ ರೊಮಾರಿಯೋ ಶೆಫರ್ಡ್ ಅವರು ಅವಕಾಶ ಪಡೆದರೂ ಅಚ್ಚರಿ ಪಡಬೇಕಿಲ್ಲ.
ಮುಲ್ಲನ್‌ಪುರ ಪಿಚ್ ವರದಿ
ಭಾನುವಾರ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಬಾರಿ ಐಪಿಎಲ್‌ನಲ್ಲಿ ಮೂರು ಪಂದ್ಯಗಳು ನಡೆದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಎರಡು ಬಾರಿ 200ಕ್ಕಿಂತ ಹೆಚ್ಚು ರನ್ ಗಳಿಸಿವೆ. ಆದರೆ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಈ ಅಂಗಳದಲ್ಲಿ 111 ರನ್‌ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡಿತ್ತು. ಈ ಆವೃತ್ತಿಯಲ್ಲಿ ಇದು ಮೊದಲ ಮಧ್ಯಾಹ್ನದ ಪಂದ್ಯವಾಗಿದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆ ಇದೆ. ಪಂಜಾಬ್ ಕಿಂಗ್ಸ್‌ಗೆ ಇದು ಇಲ್ಲಿ ಕೊನೆಯ ಪಂದ್ಯವಾಗಿದ್ದು ಇದಾದ ಬಳಿಕ ಧರ್ಮಶಾಲಾದಲ್ಲಿ ಪಂದ್ಯಗಳನ್ನು ಆಡಲಿದೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್ ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಹರ್ಪ್ರೀತ್ ಬ್ರಾರ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.












Click it and Unblock the Notifications