PBKS vs DC: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ದಿಢೀರ್ ಸ್ಥಗಿತ
ಭಾರತದ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ಮಾಡುತ್ತಿದ್ದು ಜಮ್ಮು, ರಾಜಸ್ಥಾನ, ಪಂಜಾಬ್‌ನ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಾರತ ಕೂಡ ಪಾಕಿಸ್ತಾನದ ಕ್ಷಿಪಣಿ, ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ದಾಳಿಯ ಬೆನ್ನಲ್ಲೇ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧದಲ್ಲೇ ರದ್ದುಗೊಳಿಸಲಾಗಿದೆ. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಸ್ಫೋಟಕ ಆರಂಭ ಒದಗಿಸಿದರು. ಈ ಜೋಡಿ 10.1 ಓವರ್ ಗಳಲ್ಲೇ ಮೊದಲ ವಿಕೆಟ್‌ಗೆ 122 ರನ್ ಕಲೆಹಾಕಿ ಬೃಹತ್ ಮೊತ್ತ ಗಳಿಸುವ ಲೆಕ್ಕಾಚಾರದಲ್ಲಿದೆ. 10.1ನೇ ಓವರ್ ನಲ್ಲಿ 34 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 70 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಔಟಾದರು. ಈ ಸಂದರ್ಭದಲ್ಲೇ ಮೈದಾನದಲ್ಲಿ ಏಕಾಏಕಿ ಎರಡು ದೊಡ್ಡ ವಿದ್ಯುತ್ ದೀಪಗಳು ಸ್ಥಗಿತಗೊಂಡವು.
ಪ್ರೇಕ್ಷಕರನ್ನು ಹೊರಕಳಿಸಿದ ಸಿಬ್ಬಂದಿ
ಅಪಾಯದ ಮುನ್ಸೂಚನೆ ಬೆನ್ನಲ್ಲೇ ತಕ್ಷಣ ಕಾರ್ಯಪ್ರವೃತ್ತರಾದ ಮೈದಾನದ ಸಿಬ್ಬಂದಿ ಪ್ರೇಕ್ಷಕರನ್ನು ಮೈದಾನದಿಂದ ಹೊರಕಳಿಸಿದರು. ತುರ್ತು ಬಾಗಿಲುಗಳನ್ನು ತೆರೆಯುವ ಮೂಲಕ ಕಡಿಮೆ ಸಮಯದಲ್ಲಿ ಮೈದಾನದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ಹೊರಕಳಿಸಲಾಯಿತು. ಕೂಡಲೇ ಆಟಗಾರರನ್ನು ಸುರಕ್ಷತಾ ಸ್ಥಳಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಿಂದ ಈ ಮೈದಾನ ಕೇವಲ 200 ಕಿ.ಮೀ ದೂರದಲ್ಲಿತ್ತು. ಜಮ್ಮುವಿನ ಹಲವು ಕಡೆಗಳಲ್ಲಿ ಪಾಕಿಸ್ತಾನ ಕ್ಷಿಪಣಿ, ಡ್ರೋನ್ ದಾಳಿ ಮಾಡುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.












Click it and Unblock the Notifications