India vs Australia: ನಾಯಕತ್ವ ಸಾಬೀತುಪಡಿಸಲು ಕನ್ನಡಿಗನಿಗೆ ಉತ್ತಮ ಅವಕಾಶ
ಏಕದಿನ ವಿಶ್ವಕಪ್‌ಗೆ ಅಂತಿಮ ಹಂತದ ತಯಾರಿಯ ಭಾಗವಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಭಾರತ ತಂಡ ಸಜ್ಜಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದುಕೊಂಡಿದ್ದು, ಕನ್ನಡಿಗೆ ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಹಾರ್ದಿಕ್ ಪಾಂಡ್ಯ ಭಾರತ ಏಕದಿನ ತಂಡದ ಉಪನಾಯಕನಾಗಿದ್ದಾರೆ, ಅವರೂ ಕೂಡ ಮೊದಲ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿರುವ ಕಾರಣ ಕೆಎಲ್ ರಾಹುಲ್ ಅವರಿಗೆ ನಾಯಕತ್ವ ಸಿಕ್ಕಿದೆ. ಬುಮ್ರಾ ಅವರು ಸ್ಪರ್ಧೆಯಲ್ಲಿ ಇದ್ದರೂ, ಏಕದಿನ ವಿಶ್ವಕಪ್ ನಂತರ ಏಕದಿನ ತಂಡದ ನಾಯಕ ಬದಲಾಗುವ ಸಾಧ್ಯತೆ ಇದ್ದು, ಅದಕ್ಕೆ ಕೆಎಲ್ ರಾಹುಲ್ ಅವರಿಗೂ ಪರೀಕ್ಷೆ ಎದುರಾಗಿದೆ.

ರೋಹಿತ್ ಶರ್ಮಾ ವಿಶ್ವಕಪ್ ನಂತರ ಏಕದಿನ ಮಾದರಿಯಲ್ಲಿ ನಾಯಕತ್ವ ಬಿಟ್ಟುಕೊಡುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಅವರು ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದುಕೊಂಡರೂ, 2024ರಲ್ಲಿ ಟಿ20 ವಿಶ್ವಕಪ್ ಇರುವ ಕಾರಣ ಪಾಂಡ್ಯ ಟಿ20 ಮಾದರಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದು, ಏಕದಿನ ಮಾದರಿಯಲ್ಲಿ ಪರ್ಯಾಯ ಆಯ್ಕೆಯಗಳನ್ನು ನೋಡಲಾಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವ ಬಿಟ್ಟುಕೊಡ್ತಾರ
ರೋಹಿತ್ ಶರ್ಮಾ ನಂತರ ಭಾರತದ ನಾಯಕತ್ವ ವಹಿಸಿಕೊಳ್ಳಲು ಹಲವು ಆಟಗಾರರು ರೇಸ್‌ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ (ಏಕದಿನ ಮತ್ತು ಟಿ20), ಕೆಎಲ್ ರಾಹುಲ್ (ಏಕದಿನ), ರಿಷಭ್ ಪಂತ್ (ಎಲ್ಲಾ ಸ್ವರೂಪಗಳು), ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ (ಎಲ್ಲಾ ಸ್ವರೂಪಗಳು) ಪ್ರಮುಖವಾಗಿವೆ.
ಆದರೂ, ನಾಯಕತ್ವದ ಬಗ್ಗೆ ಯಾವುದೇ ಚರ್ಚೆಗಳನ್ನು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ರೋಹಿತ್ ಅವರು ನಾಯಕರಾಗಿ ಮುಂದುವರೆಯಲಿದ್ದಾರೆ, ಏಕದಿನ ವಿಶ್ವಕಪ್ ನಂತರ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರೆ ನಾಯಕತ್ವ ಬದಲಾವಣೆಗೆ ಅವಕಾಶ ಇರುವುದಿಲ್ಲ, ರೋಹಿತ್ ಶರ್ಮಾ ಯಾವುದಾದರು ಒಂದು ಮಾದರಿಯಿಂದ ನಿವೃತ್ತರಾದರೆ ನಂತರ ಈ ಬಗ್ಗೆ ಚರ್ಚೆ ಮಾಡಲಾಗುವುದು, ಅವರು ಒಂದು ಮಾದರಿಯಲ್ಲಿ ಮಾತ್ರ ಮುಂದುವರೆಯುವುದಾಗಿ ಹೇಳಿದರೆ ನಾಯಕತ್ವ ಬದಲಾವಣೆ ಬಗ್ಗೆ ಚಿಂತೆ ಮಾಡಲಾಗುತ್ತದೆ ಎಂದರು.
ಕೆಎಲ್ ರಾಹುಲ್ ರೇಸ್‌ನಲ್ಲಿ
ಕಳಪೆ ಫಾರ್ಮ್‌ನ ನಂತರ, ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡದ ಉಪನಾಯಕ ಮತ್ತು ನಂತರ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿತ್ತು. ಟಿ20 ವಿಶ್ವಕಪ್ ಬಳಿಕ ಅವರು ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೂ, ಅವರು ಏಕದಿನ ಮಾದರಿಯಲ್ಲಿ ಭಾರತಕ್ಕೆ ನಿರ್ಣಾಯಕ ಆಟಗಾರರಾಗಿ ಉಳಿದಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಉಪಸ್ಥಿತಿಯ ಹೊರತಾಗಿಯೂ, ಆಯ್ಕೆದಾರರು ರೋಹಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಮೊದಲ ಎರಡು ಪಂದ್ಯಗಳಿಗೆ ನಾಯಕತ್ವ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
"ಕೆಎಲ್ ರಾಹುಲ್ ನಾಯಕತ್ವ ರೇಸ್‌ನಿಂದ ಎಂದಿಗೂ ಹೊರಗುಳಿಯಲಿಲ್ಲ. ಜಸ್ಪ್ರಿತ್‌ಗೆ ನಾಯಕತ್ವವನ್ನು ನೀಡದೇ ಇರುವುದಕ್ಕೆ ಕಾರಣ ಎಂದರೆ ವೇಗದ ಬೌಲರ್ ಆಗಿ, ಅವರು ಎರಡೂ ಪಂದ್ಯಗಳಲ್ಲಿ ಕಾಣಿಸಿಕೊಳ್ಳದಿರಬಹುದು. ಕೆಎಲ್ ರಾಹುಲ್ ಕೀಪರ್ ಆಗಿರುವುದರಿಂದ ನಾಯಕತ್ವ ಪಡೆದುಕೊಂಡಿದ್ದಾರೆ." ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications