Smaran Ravichandran: ಎಸ್‌ಆರ್‌ಎಚ್ ಸೇರಿದ ಕನ್ನಡಿಗ; ಸಿಎಸ್‌ಕೆ ತಂಡಕ್ಕೆ ಆಯುಷ್ ಮ್ಹಾತ್ರೆ ಎಂಟ್ರಿ
ಐಪಿಎಲ್ 2025ರ ಆವೃತ್ತಿಯಲ್ಲಿ ಎರಡು ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮೊಣಕೈ ಗಾಯದಿಂದ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದು ಅವರ ಬದಲಾಗಿ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಬದಲೀ ಆಟಗಾರನಾಗಿ ತಂಡಕ್ಕೆ ಸೇರಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ಆಡಂ ಝಂಪಾ ಕೂಡ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಆಡಂ ಝಂಪಾ ಬದಲಾಗಿ ಕರ್ನಾಟಕದ ಎಡಗೈ ಬ್ಯಾಟರ್ ಸ್ಮರಣ್ ರವಿಚಂದ್ರನ್ ಇದೀಗ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸೋಮವಾರ ರಾತ್ರಿ ಐಪಿಎಲ್ ತನ್ನ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

ಆಸ್ಟ್ರೇಲಿಯಾದ ಸ್ಪಿನ್ನರ್, ಎಸ್‌ಆರ್ ಎಚ್ ಪರವಾಗಿ ಆಡುತ್ತಿದ್ದ ಆಡಂ ಝಂಪಾ ಗಾಯಗೊಂಡಿದ್ದು ಐಪಿಎಲ್ 2025ರ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ. ಬೌಲರ್ ಗಾಯಗೊಂಡರು ಎಸ್‌ಆರ್ ಎಚ್ ಎಡಗೈ ಬ್ಯಾಟರ್ ಗೆ ಮಣೆ ಹಾಕಿರುವುದು ಅಚ್ಚರಿ ಮೂಡಿಸಿದೆ. ದೇಶೀಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸ್ಮರಣ್ ರವಿಚಂದ್ರನ್ ಎಸ್‌ಆರ್ ಎಚ್ ತಂಡಕ್ಕೆ ಉತ್ತಮ ಆಯ್ಕೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭ್ಯಾಸ ಪಂದ್ಯದ ವೇಳೆ ಸ್ಮರಣ್ ರವಿಚಂದ್ರನ್ ಆಡಿದ್ದರು. ಆರ್ ಸಿಬಿ ಕೂಡ ಸ್ಮರಣ್ ಮೇಲೆ ಕಣ್ಣಿಟ್ಟಿತ್ತು, ಆದರೆ ಎಸ್‌ಆರ್ ಎಚ್ ತಂಡದ ಆಟಗಾರ ಗಾಯಗೊಂಡಿದ್ದರಿಂದ ಸ್ಮರಣ್ ಇದೀಗ ಹೈದರಾಬಾದ್ ಪಾಲಾಗಿದ್ದಾರೆ. ಮಹಾರಾಜ ಟಿ20 ಟ್ರೋಫಿ ಪಂದ್ಯಾವಳಿಯಲ್ಲೂ ಸ್ಮರಣ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ವಿದರ್ಭ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಸ್ಮರಣ್ ರವಿಚಂದ್ರನ್ ಕರ್ನಾಟಕ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 92 ಎಸೆತಗಳಲ್ಲಿ 101 ರನ್ ಗಳಿಸಿದ್ದರು. 7 ಫಸ್ಟ್‌ಕ್ಲಾಸ್ ಪಂದ್ಯಗಳಲ್ಲಿ 332 ರನ್ ಗಳಿಸಿದ್ದಾರೆ, ಇದರಲ್ಲಿ 2 ಅರ್ಧಶತಕ ಒಂದು ಶತಕ ಕೂಡ ಇದೆ.
ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದು ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಸಿಎಸ್‌ಕೆ 17 ವರ್ಷದ ಆಯುಷ್ ಮ್ಹಾತ್ರೆ ಅವರನ್ನು ಆಯ್ಕೆ ಮಾಡಿದೆ. ಆಯುಷ್ ಮಾತ್ರ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 504 ರನ್ ಗಳಿಸಿದ್ದಾರೆ. 7 ಪ್ರಥಮ ದರ್ಜೆಗಳಲ್ಲಿ ಆಡಿದ್ದು 458 ರನ್ ಗಳಿಸಿದ್ದಾರೆ. 135.50 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಮುಂಬೈ ತಂಡವನ್ನು ಪ್ರತಿನಿಧಿಸುತ್ತಾರೆ.












Click it and Unblock the Notifications