Fastest T20 Century: ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ನಮೀಬಿಯಾ ಬ್ಯಾಟರ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ದಾಖಲಾಗಿದೆ. ಮಂಗಳವಾರ ನೇಪಾಳದ ಕೀರ್ತಿಪುರದಲ್ಲಿ ನಡೆದ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ ಕೇವಲ 33 ಎಸೆತಗಳಲ್ಲಿ ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ ಟಿ20 ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ಸಿಡಿಸಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟರ್ ಜಾನ್ ನಿಕೋಲ್ ಲಾಫ್ಟಿ-ಈಟನ್ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ನೇಪಾಳ ತಂಡದ ಬ್ಯಾಟರ್ ಕುಶಾಲ್ ಮಲ್ಲ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕುಶಾಲ್ ಮಲ್ಲಾ 34 ಎಸೆತಗಳಲ್ಲಿ ಶತಕ ಸಿಡಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು.

ಕುಶಾಲ್ ಮಲ್ಲಾ ಕಳೆದ ವರ್ಷ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ವೇಗದ ಶತಕ ಸಿಡಿಸಿದ್ದ ದಾಖಲೆ ಮಾಡಿದ್ದರು. ಆ ಪಂದ್ಯದಲ್ಲಿ ನೇಪಾಳ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 314 ರನ್ ಗಳಿಸಿತ್ತು.
ಲಾಫ್ಟಿ-ಈಟನ್ ಕೇವಲ 36 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸಹಿತ 101 ರನ್ ಗಳಿಸಿದರು. 280.55 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅವರು, ನಮೀಬಿಯಾ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು.
ಎಡಗೈ ಬ್ಯಾಟರ್ ಬ್ಯಾಟರ್ ಜಾನ್ ನಿಕೋಲ್ ಲಾಫ್ಟಿ-ಈಟನ್ ಬೌಂಡರಿಗಳ ಮೂಲಕವೇ 92 ರನ್ ಗಳಿಸಿದರು. 22 ವರ್ಷ ವಯಸ್ಸಿ ಜಾನ್ ನಿಕೋಲ್ ಇದುವರೆಗೆ 33 ಟಿ20 ಮತ್ತು 36 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಎಲ್ಲಾ ಮಾದರಿಯಲ್ಲಿ ಇದು ಅವರ ಮೊದಲ ಶತಕವಾಗಿದೆ.
ನೇಪಾಳ ವಿರುದ್ಧ ನಮೀಬಿಯಾ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿದೆ. ಆರಂಭಿಕ ಆಟಗಾರ ಮಲನ್ ಕ್ರುಗರ್ 59 ರನ್ ಗಳಿಸಿ ಅಜೇಯರಾಗಿ ಉಳಿದರು. ಪ್ರತ್ಯುತ್ತರವಾಗಿ, ನೇಪಾಳ 19 ನೇ ಓವರ್‌ನಲ್ಲಿ 186 ರನ್‌ಗಳಿಗೆ ಆಲೌಟ್ ಆಯಿತು. ರೂಬೆನ್ ಟ್ರಂಪೆಲ್‌ಮನ್ 4 ವಿಕೆಟ್ ಪಡೆದು ಮಿಂಚಿದರು.












Click it and Unblock the Notifications