IPL 2023: ಆರ್‌ಸಿಬಿ Vs ಸಿಎಸ್‌ಕೆ ಪಂದ್ಯದ ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಲಾಠಿ ಚಾರ್ಜ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ 25ನೇ ಪಂದ್ಯದಲ್ಲಿ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣೆಸಲಿವೆ. ಎರಡೂ ತಂಡಗಳು ಅಪಾರ ಅಭಿಮಾನಿಗಳನ್ನು ಹೊಂದಿದ್ದು ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪಂದ್ಯದ ಟಿಕೆಟ್‌ಗಾಗಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಭಿಮಾನಿಗಳು ಮುಗಿಬಿದ್ದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಈಗಾಗಲೇ ಆನ್‌ಲೈನ್‌ನಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ, ಆದರೆ ಕೌಂಟರ್ ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಹೈ ವೋಲ್ಟೇಜ್ ಪಂದ್ಯದ ಟಿಕೆಟ್‌ಗಾಗಿ ಎರಡೂ ತಂಡಗಳ ಅಭಿಮಾನಿಗಳು ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತಿದ್ದರು. ಆದರೆ ಟಿಕೆಟ್ ಮಾರಾಟ ಆರಂಭವಾದ ಕೆಲವು ಗಂಟೆಗಳಲ್ಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ, ಗಂಟೆಗಟ್ಟಲೆ ಕಾದರೂ ಟಿಕೆಟ್ ಸಿಗದ ಕೆಲವು ಅಭಿಮಾನಿಗಳು ಕೋಪಗೊಂಡಿದ್ದಾರೆ.

ಅಭಿಮಾನಿಗಳ ಕೋಪಗೊಂಡು ದಾಂಧಲೆ ಆರಂಭಿಸಿದ್ದಾರೆ, ಇದೇ ಸಮಯದಲ್ಲಿ ಭದ್ರತೆಗಾಗಿ ನಿಯೋಜನೆಯಾಗಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮುಖಾಮುಖಿಯನ್ನು ನೋಡಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ.

ಸೋಮವಾರ ನಡೆಯಲಿದೆ ಹೈವೋಲ್ಟೇಜ್ ಪಂದ್ಯ
ಏಪ್ರಿಲ್ 17ರಂದು ಸೋಮವಾರ ಸಂಜೆ 7.30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸಾಂಪ್ರದಾಯಿಕ ಎದುರಾಳಿಗಳು ಎಂದು ಕರೆಸಿಕೊಳ್ಳುವ ಈ ಪಂದ್ಯವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಆರ್ ಸಿಬಿ ಈ ಬಾರಿ ಐಪಿಎಲ್‌ನಲ್ಲಿ 4 ಪಂದ್ಯಗಳನ್ನಾಡಿದ್ದು ಎರಡು ಪಂದ್ಯಗಳಲ್ಲಿ ಗೆಲುವು ಕಂಡಿದೆ, ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿತ್ತು. ಕರ್ನಾಟಕದ ಆಟಗಾರ ವೈಶಾಕ್ ವಿಜಯ್ ಕುಮಾರ್ ಪದಾರ್ಪಣಾ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಗೆಲುವಿಗೆ ಪ್ರಮುಖ ಕಾರಣವಾದರು. ವಿರಾಟ್ ಕೊಹ್ಲಿ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಕೂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಚೆಪಾಕ್‌ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸುವ ಮೂಲಕ ಹಿನ್ನಡೆ ಅನುಭವಿಸಿದೆ. ಆರ್ ಸಿಬಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಸಿಎಸ್‌ಕೆ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ
ಪ್ರಮುಖ ಪಂದ್ಯಕ್ಕೆ ಮುನ್ನವೇ ಸಿಎಸ್‌ಕೆ ತಂಡಕ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ತಂಡದ ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಲಭ್ಯರಾಗಿದ್ದಾರೆ, ಪ್ರಮುಖ ಬೌಲರ್ ಸಿಸಾಂದ ಮಗಾಲಾ ಕೂಡ ಬೆರಳಿನ ಗಾಯಕ್ಕೆ ತುತ್ತಾಗಿದ್ದು ಆರ್ ಸಿಬಿ ವಿರುದ್ಧ ಕಣಕ್ಕಿಳಿಯುದಿಲ್ಲ. ಧೋನಿ ಕೂಡ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ, ಆದರೆ ಅವರು ಫಿಟ್ ಆಗಲಿದ್ದು, ಆರ್ ಸಿಬಿ ವಿರುದ್ಧ ಆಡಲಿದ್ದಾರೆ ಎನ್ನಲಾಗಿದೆ.
ಎರಡೂ ತಂಡಗಳು ಇದುವರೆಗೂ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಬೆಂಗಳೂರು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೇ ಅಂತ್ಯವಾಗಿದೆ. ಕಳೆದ ಆವೃತ್ತಿಯಲ್ಲಿ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಎರಡೂ ತಂಡಗಳು ಒಂದು ಬಾರಿ ಗೆಲುವು ಸಾಧಿಸಿದ್ದವು.












Click it and Unblock the Notifications