ದಾವಣಗೆರೆ; ಅಕ್ಟೋಬರ್ 22 ರಿಂದ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿ
ದಾವಣಗೆರೆ, ಅಕ್ಟೋಬರ್ 20: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಅಕ್ಟೋಬರ್ 22 ರಿಂದ 29ರ ತನಕ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ನಡೆಯಲಿವೆ. ಅಕ್ಟೋಬರ್ 22 ಮತ್ತು 23 ರಂದು ಅರ್ಹತಾ ಸುತ್ತಿನ ಪಂದ್ಯಗಳಿವೆ.
ದಾವಣಗೆರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಹೈಸ್ಕೂಲ್ ಮೈದಾನದಲ್ಲಿರುವ ಟೆನಿಸ್ ಕ್ಲಬ್ ಆಶ್ರಯದಲ್ಲಿ ದಾವಣಗೆರೆ ಟೆನಿಸ್ ಕೋರ್ಟ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು.

ಡಾ. ವೆಂಕಟೇಶ್ ಎಂ. ವಿ. ಮಾತನಾಡಿ, "ದಾವಣಗೆರೆಯಲ್ಲಿ ಅಕ್ಟೋಬರ್ 22 ರಿಂದ 29ರವರೆಗೆ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ನಡೆಯಲಿದ್ದು, ವಿವಿಧ ದೇಶದ ಆಟಗಾರರು ಈ ಪಂದ್ಯಾವಳಿಗಳಲ್ಲಿ ಭಾಗವಹಿಸುವರು" ಎಂದರು.
ಪಂದ್ಯಾವಳಿಯ ವಿವರಗಳು; ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿ ದಾವಣಗೆರೆಯಲ್ಲಿ ಮೂರನೇ ಬಾರಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಅಮೆರಿಕ, ಸ್ವಿಡ್ಜರ್‌ಲ್ಯಾಂಡ್, ಸ್ವೀಡನ್ ಹಾಗೂ ಆಸ್ಟ್ರೇಲಿಯಾ ಒಳಗೊಂಡಂತೆ ವಿಶ್ವದ 16 ರಿಂದ 19 ದೇಶದ ಆಟಗಾರರು ಭಾಗವಹಿಸಲಿದ್ದಾರೆ.
ಅಕ್ಟೋಬರ್ 22 ಮತ್ತು 23 ರಂದು ನಡೆಯುವ ಅರ್ಹತಾ ಸುತ್ತಿನ ಪಂದ್ಯದಲ್ಲಿ 32 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ಗೆಲುವು ಸಾಧಿಸಿದ 8 ಕ್ರೀಡಾಪಟುಗಳನ್ನು ಮುಖ್ಯ ಪಂದ್ಯಾವಳಿಗೆ ಆಯ್ಕೆ ಮಾಡಲಾಗುತ್ತದೆ. ಮುಖ್ಯ ಪಂದ್ಯಾವಳಿಯಲ್ಲಿ ನೇರವಾಗಿ 20 ಸ್ಪರ್ಧಿಗಳು ಹಾಗೂ ಅರ್ಹತಾ ಸುತ್ತಿನಿಂದ 8 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಅಕ್ಟೋಬರ್ 24 ರಂದು ಬೆಳಗ್ಗೆ 9 ಗಂಟೆಗೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ.
ಈ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ 15 ಲಕ್ಷ ರೂ. ನಗದು ಬಹುಮಾನವನ್ನು ನೀಡಲಾಗುತ್ತದೆ. ಟೆನಿಸ್ ಬಗ್ಗೆ ಆಸಕ್ತಿ ಇರುವ ಜನರು ದಾವಣಗೆರೆಯಲ್ಲಿ ನಡೆಯವ ಅಂತರಾಷ್ಟ್ರೀಯ ಟೆನಿಸ್ ಟೂರ್ನಿಯನ್ನು ವೀಕ್ಷಿಸಬಹುದಾಗಿದೆ.
ಧಾರವಾಡದಲ್ಲಿ ಪಂದ್ಯ; ಈಗಾಗಲೇ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಟೂರ್ನಿಮೆಂಟ್ 2023 ನಡೆಯುತ್ತಿದೆ. ಅಕ್ಟೋಬರ್ 15 ರಿಂದ 22ರ ತನಕ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯು ಈ ಪಂದ್ಯಗಳನ್ನು ನಡೆಸುತ್ತಿದೆ.
ಎಂಟು ಮಂದಿ ಶ್ರೇಯಾಂಕ ಆಟಗಾರರು ಉತ್ತಮ ಪ್ರದರ್ಶನ ನೀಡಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ. ಇವರಲ್ಲಿ ಭಾರತದ 3ನೇ ಶ್ರೇಯಾಂಕ ದ್ವಿಗ್ವಿಜಯ್ ಪ್ರತಾಪ್ ಸಿಂಗ್, 4ನೇ ಶ್ರೇಯಾಂಕ ರಾಮ್‌ಕುಮಾರ್ ರಾಮನಾಥ್, 7ನೇ ಶ್ರೇಯಾಂಕ ಸಿದ್ಧಾರ್ಥ ರಾವತ್, 8ನೇ ಶ್ರೇಯಾಂಕ ಎಸ್. ಡಿ. ಪ್ರಜ್ವಲ್ ದೇವ್ ಒಳಗೊಂಡಿದ್ದಾರೆ.
ಅಂತಿಮ ಪಂದ್ಯಗಳು ಡಬಲ್ಸ್ ಹಾಗೂ ಸಿಂಗಲ್ಸ್ ಕ್ರಮವಾಗಿ ಅಕ್ಟೋಬರ್ 21 ಹಾಗೂ 22ರಂದು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಸುಮಾರು 25 ಸಾವಿರ ಡಾಲರ್ (20 ಲಕ್ಷ ರೂ.) ಮೊತ್ತದ ಪ್ರಶಸ್ತಿ ಹಣ ಸಿಗಲಿದೆ.












Click it and Unblock the Notifications