India vs Bangladesh: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ
ಕಾನ್ಪುರ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾಗಿದೆ. ಟಾಸ್ ಗೆದ್ದ ರೋಹಿತ್ ಶರ್ಮಾ, ಆರಂಭದಲ್ಲಿ ವೇಗಿಗಳಿಗೆ ಸಹಾಯ ಸಿಗುವ ಸಾಧ್ಯತೆ ಇರುವುದರಿಂದ ಫೀಲ್ಡಿಂಗ್ ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಾವು ಉತ್ತಮ ಪ್ರದರ್ಶನ ನೀಡಿರಲಿಲ್ಲ, ಇಲ್ಲಿನ ಪರಿಸ್ಥಿತಿ ನೋಡಿದಾಗ ವೇಗಿಗಳಿಗೆ ಆರಂಭದಲ್ಲಿ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಇದೆ. ಮೂವರು ವೇಗಿಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಬಾಂಗ್ಲಾದೇಶ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮಾತನಾಡಿ, ಟಾಸ್ ಗೆದ್ದಿದ್ದರೆ ನಾವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆವು, ನಾವು ಇಂದು ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸವಿದೆ. ಬ್ಯಾಟಿಂಗ್ ಮಾಡಲು ಈ ವಿಕೆಟ್ ಉತ್ತಮವಾಗಿದೆ ಎನಿಸುತ್ತಿದೆ. ನಹೀದ್ ಮತ್ತು ಟಸ್ಕಿನ್ ಇಬ್ಬರನ್ನು ಕೈಬಿಡಲಾಗಿದ್ದು, ತೈಜುಲ್ ಇಸ್ಲಾಂ ಮತ್ತು ಖಲಿದ್ ಅಹ್ಮದ್ ಪ್ಲೇಯಿಂಗ್ ಇಲೆವೆನ್‌ನಲ್ಲಿದ್ದಾರೆ ಎಂದು ಹೇಳಿದರು.
ಮಳೆ ಆತಂಕದ ನಡುವೆ ಪಂದ್ಯ
ಕಾನ್ಪುರದಲ್ಲಿ ಮೂರು ದಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಮೊದಲ ದಿನವೇ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಗಿದೆ. ಇನ್ನೂ ಎರಡು ದಿನ ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಆತಂಕವಿದೆ. ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಿಂದ ಈ ಪಂದ್ಯ ಗೆಲ್ಲುವುದು ಮಹತ್ವವಾಗಿದೆ. ಮಳೆ ಬಂದರೂ ಇಡೀ ದಿನದ ಆಟ ರದ್ದಾಗುವ ಸಾಧ್ಯತೆ ಕಡಿಮೆ ಇದೆ.
ಉಭಯ ತಂಡಗಳ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ : ಶದ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಹಸನ್ ಮಹಮೂದ್, ಖಲೀದ್ ಅಹ್ಮದ್.












Click it and Unblock the Notifications