India vs Bangladesh: ಕಾಡಿದ ಮಳೆ; ಮೂರನೇ ದಿನದಾಟವೂ ರದ್ದು
ಕಾನ್ಪುರ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಎಡಬಿಡದೆ ಕಾಡುತ್ತಿದೆ. ಮಳೆಯಿಂದಾಗಿ ಮೂರನೇ ದಿನದಾಟ ಕೂಡ ರದ್ದಾಗಿದೆ. ಭಾನುವಾರ ಬೆಳಿಗ್ಗೆ ಮಳೆಯಾಗದೇ ಇದ್ದರೂ, ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಡೀ ಮೈದಾನದಲ್ಲಿ ನೀರಿ ನಿಂತಿದ್ದರಿಂದ ಮೂರನೇ ದಿನದಾಟವನ್ನು ರದ್ದುಗೊಳಿಸಲಾಗಿದೆ.
ಮಧ್ಯಾಹ್ನ ಎರಡು ಗಂಟೆಯವರೆಗೂ ಮೈದಾನದ ಸಿಬ್ಬಂದಿ ಸಾಕಷ್ಟು ಪ್ರಯತ್ನ ಮಾಡಿದರೂ, ಮೈದಾನವೂ ಪಂದ್ಯ ಆಡಲು ಸಜ್ಜಾಗಲಿಲ್ಲ. ಮೈದಾನವು ಸಂಪೂರ್ಣವಾಗಿ ಒದ್ದೆಯಾಗಿದ್ದ ಕಾರಣ ಮಧ್ಯಾಹ್ನದ ನಂತರ ಮೂರನೇ ದಿನದಾಟ ರದ್ದಾಗಿದೆ ಎಂದು ಅಂಪೈರ್ ಗಳು ಘೋಷಣೆ ಮಾಡಿದರು.

ಮಳೆಯಿಂದಾಗಿ ಶುಕ್ರವಾರ ಒಂದು ಗಂಟೆ ತಡವಾಗಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ದಿನ ಬಾಂಗ್ಲಾದೇಶ 35 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿದ ಕಾರಣ ಮೊದಲ ದಿನದಾಟ ರದ್ದಾಗಿತ್ತು. ಆಕಾಶ್ ದೀಪ್ 2 ವಿಕೆಟ್ ಪಡೆದು ಮಿಂಚಿದ್ದರೆ, ರವಿಚಂದ್ರನ್ ಅಶ್ವಿನ್ ಬಾಂಗ್ಲಾದೇಶ ನಾಯಕ ಶಾಂಟೋ ವಿಕೆಟ್ ಪಡೆದಿದ್ದರು.
ಭಾರತಕ್ಕೆ ತಲೆನೋವು
ಎರಡನೇ ದಿನದಾಟ ಕೂಡ ಮಳೆಯಿಂದಾಗಿ ರದ್ದುಗೊಂಡಿದ್ದರಿಂದ ಭಾರತ ತಂಡದಲ್ಲಿ ಟೆನ್ಷನ್ ಶುರುವಾಗಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿರುವ ಭಾರತಕ್ಕೆ ಈ ಪಂದ್ಯವನ್ನು ಗೆದ್ದರೆ ಫೈನಲ್ ಹಾದಿ ಮತ್ತಷ್ಟು ಸುಲಭವಾಗಲಿದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ ಮತ್ತಷ್ಟು ಅಂಕ ಸಂಪಾದಿಸುವ ಅವಕಾಶ ಕೈತಪ್ಪಲಿದೆ.
ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಹೊಂದಿರುವ ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಈಗಾಗಲೇ ಎರಡು ದಿನಗಳ ಆಟ ಸಂಪೂರ್ಣವಾಗಿ ರದ್ದಾಗಿರುವ ಕಾರಣ, ಬಾಂಗ್ಲಾದೇಶ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.
ಅಭಿಮಾನಿಗಳ ಆಕ್ರೋಶ
ಒದ್ದೆಯಾದ ಮೈದಾನದ ಪರಿಣಾಮ ಮೂರನೇ ದಿನದಾಟ ರದ್ದಾಗಿದ್ದು ಕ್ರಿಕೆಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಮೈದಾನಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ವಿಶ್ವದರ್ಜೆಯ ಮೈದಾನಗಳಲ್ಲಿ ಮಾತ್ರ ಪಂದ್ಯವನ್ನು ಆಯೋಜನೆ ಮಾಡಬೇಕು, ಪಂದ್ಯಗಳನ್ನು ಆಯೋಜಿಸುವ ಮುನ್ನ ಹವಾಮಾನ ಮುನ್ಸೂಚನೆಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೇಳಿದ್ದಾರೆ. ಭಾನುವಾರ ಮಳೆ ಬರದೇ ಇದ್ದರೂ, ಮಧ್ಯಾಹ್ನವಾದರೂ ಮೈದಾನವನ್ನು ಒಣಗಿಸಲು ಸಿಬ್ಬಂದಿ ಪರದಾಡಿದರು. ಆದರೂ ಅವರ ಪ್ರಯತ್ನ ಸಫಲವಾಗಲಿಲ್ಲ.












Click it and Unblock the Notifications