T20 World Cup: ಆಸ್ಟ್ರೇಲಿಯಾ ಮಟ್ಟ ಹಾಕಿದ ಭಾರತ; ಸೆಮಿಫೈನಲ್‌ನಲ್ಲಿ ಎದುರಾಳಿ ಯಾರು?
ಸೆಂಟ್ ಲೂಸಿಯಾದ ಡರೇನ್ ಸಾಮಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.

ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಸಹಿತ 92 ರನ್ ಗಳಿಸುವ ಮೂಲಕ ಭಾರತ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು. ರಿಷಬ್ ಪಂತ್ 15 ರನ್, ಸೂರ್ಯ ಕುಮಾರ್ 31 ರನ್, ಶಿವಂ ದುಬೆ 28 ರನ್ ಗಳಿಸಿದರೆ. ಪಾಂಡ್ಯ ಅಜೇಯ 27 ರನ್ ಮತ್ತು ಜಡೇಜಾ ಅಜೇಯ 9 ರನ್ ಗಳಿಸಿದರು.
ಆತಂಕ ಮೂಡಿಸಿದ್ದ ಹೆಡ್
206 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ಅರ್ಷದೀಪ್ ಸಿಂಗ್ ಮೊದಲ ಓವರ್ ನಲ್ಲೇ ಆಘಾತ ನೀಡಿದರು. 6 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ಬಳಿಕ ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
28 ಎಸೆತಗಳಲ್ಲಿ 37 ರನ್ ಗಳಿಸಿದ್ದ ಮಾರ್ಷ್ ಕುಲದೀಪ್ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಹಿಡಿದ ಅದ್ಭುತ ಬೌಲಿಂಗ್‌ಗೆ ಬಲಿಯಾದರು. ಆದರೆ ಹೆಡ್ ಒಂದು ಕಡೆ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಭಾರತದ ಗೆಲುವು ಕಸಿಯುವ ಆತಂಕ ಮೂಡಿಸಿದ್ದರು.
43 ಎಸೆತಗಳಲ್ಲಿ 76 ರನ್ ಗಳಿಸಿದ್ದ ಹೆಡ್‌ರನ್ನು ಬುಮ್ರಾ ಔಟ್ ಮಾಡುವ ಮೂಲಕ ಭಾರತ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿತು. ಹೆಡ್ ಔಟಾಗುತ್ತಿದ್ದಂತೆ ಬಂದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 181 ರನ್ ಮಾತ್ರ ಗಳಿಸಿದ ಆಸ್ಟ್ರೇಲಿಯಾ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಗ್ರೂಪ್ 2ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಗ್ರೂಪ್ 1ರಲ್ಲಿ ಭಾರತ ಸೆಮಿಫೈನಲ್ ತಲುಪಿದೆ. ಇನ್ನೊಂದು ಸ್ಥಾನಕ್ಕೆ ಈಗ ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಡುವೆ ಪೈಪೋಟಿ ನಡೆಯಲಿದೆ.
ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ಏನಾದರೂ ಬಾಂಗ್ಲಾದೇಶವನ್ನು ಸೋಲಿಸಿದರೆ, ಆಸ್ಟ್ರೇಲಿಯಾ ವಿಶ್ವಕಪ್‌ನಿಂದ ಹೊರಬೀಳಲಿದ್ದು, ಭಾರತ ಮತ್ತು ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಲಿವೆ.
ಬಾಂಗ್ಲಾದೇಶ ಏನಾದರೂ ದೊಡ್ಡ ಅಂತರದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿದರೆ, ಬಾಂಗ್ಲಾ ಕೂಡ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶ ಇದೆ. ಕಡಿಮೆ ಅಂತರದಲ್ಲಿ ಏನಾದರೂ ಬಾಂಗ್ಲಾ ಸೋತರೆ ಆಗ ಆಸ್ಟ್ರೇಲಿಯಾಗೆ ರನ್‌ರೇಟ್ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಸಿಗುತ್ತದೆ.












Click it and Unblock the Notifications