ಗೌತಮ್ ಗಂಭೀರ್ ಬಳಿಕ ಮೊಹಮ್ಮದ್ ಶಮಿಗೆ ಜೀವ ಬೆದರಿಕೆ
ಐಪಿಎಲ್ 2025 ಪಂದ್ಯಾವಳಿ ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ ಆತಂಕಕಾರಿ ಬೆಳವಣಿಗೆ ನಡೆದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಮೇಲ್ ಮೂಲಕ ಕೊಲೆ ಬೆದರಿಕೆ ಸಂದೇಶ ಕಳಿಸಿದ್ದು, ರಕ್ಷಣೆ ಪಡೆಯಲು 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ.
ಈ ಬೆದರಿಕೆ ಮೇಲ್ ಅನ್ನು ಮೊಹಮ್ಮದ್ ಶಮಿ ಅವರ ಸಹೋದರ ಮೊಹಮ್ಮದ್ ಹಸೀಬ್ ಮೇ 4 ರಂದು ಪತ್ತೆಹಚ್ಚಿದರು ಮತ್ತು ತಕ್ಷಣವೇ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಐಪಿಸಿ ಸೆಕ್ಷನ್ 308(4) ಮತ್ತು ಐಟಿ ಕಾಯ್ದೆ ಸೆಕ್ಷನ್ 66ಡಿ ಮತ್ತು 66ಇ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ರಜಪೂತ್ ಸಿಂದರ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಈ ಇಮೇಲ್ ಅನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಗೌತಮ್ ಗಂಭೀರ್ ಬಳಿಕ ಶಮಿಗೆ ಬೆದರಿಕೆ
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಬೆದರಿಕೆ ಇಮೇಲ್‌ಗಳು ಬಂದ ಕೆಲವೇ ವಾರಗಳ ಅಂತರದಲ್ಲಿ ಈ ಘಟನೆ ನಡೆದಿದೆ. ಗಂಭೀರ್ ಪ್ರಕರಣದಲ್ಲಿ, ಆರೋಪಿಯನ್ನು ಗುಜರಾತ್‌ನ ಮಾನಸಿಕ ಅಸ್ವಸ್ಥ ಎಂಜಿನಿಯರಿಂಗ್ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಎರಡೂ ಪ್ರಕರಣಗಳ ತನಿಖೆ ಮುಂದುವರೆದಿದ್ದು, ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ಕಳಪೆ ಫಾರ್ಮ್‌ನಲ್ಲಿರುವ ಶಮಿ
ಮೊಹಮ್ಮದ್ ಶಮಿ ಈ ಬಾರಿ ಆವೃತ್ತಿಯಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಸೋಮವಾರ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಅವರನ್ನು ಕೈಬಿಡಲಾಗಿದೆ. ಈ ಆವೃತ್ತಿಯಲ್ಲಿ ಅವರು ಕೇವಲ 6 ವಿಕೆಟ್ ಮಾತ್ರ ಪಡೆದಿದ್ದು, ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.
ಈ ಆವೃತ್ತಿಯಲ್ಲಿ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ, 56.17 ರ ಸರಾಸರಿ ಮತ್ತು 11.23 ರ ಎಕಾನಮಿ ಹೊಂದಿದ್ದಾರೆ. ಮೊದಲ ಐದು ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಅವರು ಬಳಿಕ 4 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 75 ರನ್ ಬಿಟ್ಟುಕೊಟ್ಟರು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಬೌಲಿಂಗ್ ಅಂಕಿ ಅಂಶವಾಗಿದೆ.












Click it and Unblock the Notifications