ಯಡಿಯೂರಪ್ಪ, ಈಶ್ವರಪ್ಪ ಲೂಟಿ ಮಾಡಿದ್ದು ಸಾವಿರ ಕೋಟಿ
ಶಿವಮೊಗ್ಗ, ಅ.21 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಇಬ್ಬರೂ ಸೇರಿ ಸಾವಿರ ಕೋಟಿಗೂ ಅಧಿಕ ಹಣ ಲೂಟಿ ಹೊಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಭಾನುವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಭದ್ರಕೋಟೆಯಲ್ಲಿಯೇ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಬ್ಬರೂ ಸೇರಿ ಜಿಲ್ಲೆಯಲ್ಲಿ ಸಾವಿರ ಕೋಟಿ ರೂ.ಗಳಿಗೆ ಅಧಿಕ ಹಣ ಲೂಟಿ ಹೊಡೆದಿದ್ದಾರೆ ಎಂದು ದೂರಿದ್ದಾರೆ.

ಶಿವಮೊಗ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೆಲ್ದರ್ಜೆಗೆ ಏರಿಸಲು ನಮ್ಮ ಸರ್ಕಾರ ಆದೇಶ ಹೊರಡಿಸಿದೆ ಎಂದ ಸಿದ್ದರಾಮಯ್ಯ, ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕುಮಾರಸ್ವಾಮಿ ಮಾಡಿದ ತಪ್ಪಿನಿಂದಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಅದನ್ನು ಬಳಸಿಕೊಂಡು ಮುಖ್ಯಮಂತ್ರಿಯಾದ ಯಡಿಯೂರಪ್ಪ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತಲೇ ಲೂಟಿ ಹೊಡೆದರು.
ನಂತರ ಉಪ ಮುಖ್ಯಮಂತ್ರಿಯಾದ ಕೆ.ಎಸ್.ಈಶ್ವರಪ್ಪ ಅವರು ಹಣ ಲೂಟಿ ಹೊಡೆದರು ಜಿಲ್ಲೆಯ ಅಭಿವೃದ್ಧಿ ಮಾಡಿಲ್ಲ. ಶಿವಮೊಗ್ಗ ಯಡಿಯೂರಪ್ಪ, ಈಶ್ವರಪ್ಪ ಭದ್ರಕೋಟೆ ಅನ್ನುವ ಮಾತನ್ನು ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರು ಸುಳ್ಳು ಮಾಡಿ, ಕಾಂಗ್ರೆಸ್ ಗೆ ಬೆಂಬಲ ನೀಡಿ ಎಂದು ಸಿಎಂ ಮನವಿ ಮಾಡಿದರು.
ಸಂತೋಷ್ ಲಾಡ್ ಸಮರ್ಥನೆ : ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿವರೆಗೆ ನಾವು ಪಾದಯಾತ್ರೆ ಮಾಡಿದ್ದೇವೆ. ಅಕ್ರಮಗಣಿಗಾರಿಕೆಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಸಚಿವ ಸಂತೋಷ್ ಲಾಡ್ ಅವರ ವಿರುದ್ಧ ಬಂದಿರುವ ಆರೋಪಗಳಿಲ್ಲ ಹುರುಳಿಲ್ಲ. ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ನೀಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ಸಮರ್ಥನೆ ನೀಡಿದರು.
ವಿಶೇಷ ನ್ಯಾಯಾಲಯ : ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ತೆರೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಾರ್ಯಕರ್ತರಿಗೆ ಕರೆ : ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜಿಲ್ಲೆಯ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವಂತೆ ಮಾಡಬೇಕು ಎಂದು ಸಿಎಂ ಕರೆ ನೀಡಿದರು.












Click it and Unblock the Notifications