ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶೀಘ್ರವೇ ಸಿಗಲಿದೆ ಸಿಹಿಸುದ್ದಿ
ಶಿವಮೊಗ್ಗ, ಡಿಸೆಂಬರ್ 22: ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿಯಲ್ಲಿ ಡ್ಯಾಂ ನಿರ್ಮಾಣ ಮಾಡಿದ ಬಳಿಕ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮನೆ, ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಯಾಗಿದೆ. ಹುಟ್ಟಿ ಬೆಳೆದ ಊರು ಬಿಟ್ಟು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ಇಂತಹ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ.
ಈ ಕುರಿತು ಸೊರಬದ ಪ್ರವಾಸಿ ಮಂದಿರದಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. "ಜಿಲ್ಲೆಯಲ್ಲಿ ಹಲವು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಒಕ್ಕಲೆಬ್ಬಿಸದಂತೆ ಸರ್ಕಾರದಿಂದ ನಿಯಮಾನುಸಾರ ಹಕ್ಕುಪತ್ರ ಒದಗಿಸಿಕೊಟ್ಟು ಸಾಗುವಳಿ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುವಂತಾಗಲು ಮತ್ತು ಮನೆ ಕಟ್ಟಿಕೊಂಡು ಜೀವನ ನಿರ್ವಹಿಸುತ್ತಿರುವ ಅರ್ಹ ರೈತರಿಗೆ ಮತ್ತು ನಿವಾಸಿಗಳಿಗೆ ಸರ್ಕಾರದಿಂದಲೇ ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದೆ" ಎಂದರು.

"ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಹಿಂದೆ ಸದರಿ ವಿಷಯವು ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷ್ಯಾಧಾರ ಮತ್ತು ದಾಖಲೆಗಳ ಸಹಿತ ಸಮರ್ಥಿಸಿಕೊಳ್ಳುವಲ್ಲಿ ನ್ಯೂನತೆಗಳಿದ್ದುದನ್ನು ಗುರುತಿಸಿ, ಓರ್ವ ಸಮರ್ಥ ನ್ಯಾಯವಾದಿಯೊಬ್ಬರನ್ನು ಈಗಾಗಲೇ ನೇಮಿಸಿದೆ. 2025ರ ಜನವರಿಯಲ್ಲಿ ಈ ಪ್ರಕರಣ ವಿಚಾರಣೆಗೆ ಬರಲಿದ್ದು, ರಾಜ್ಯದ ಶರಾವತಿ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ತೀರ್ಪು ಹೊರಬರುವ ಆಶಯವಿದೆ" ಎಂದು ಸಚಿವರು ತಿಳಿಸಿದರು.
ಹಕ್ಕುಪತ್ರ ವಿತರಣೆ: ಸಚಿವ ಮಧು ಬಂಗಾರಪ್ಪ ಮಾತನಾಡಿ, "ಹಲವು ದಶಕಗಳ ಸಮಸ್ಯೆಗೆ ಈ ಹಿಂದಿನ ಚುನಾಯಿತ ಜನಪ್ರತಿನಿಧಿಗಳು ಅರ್ಹ ಬಡ ರೈತರಿಗೆ, ವನವಾಸಿಗಳಿಗೆ ಸರಿಯಾದ ನ್ಯಾಯ ಒದಗಿಸುವಲ್ಲಿ ವಿಫುಲರಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅಧಿಕಾರಾವಧಿಯಲ್ಲಿ ವಿತರಿಸಲಾಗಿದ್ದ ಹಕ್ಕುಪತ್ರಗಳನ್ನು ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ಅನೂರ್ಜಿತಗೊಳಿಸಿ, ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದವು. ಪ್ರಸ್ತುತ ಸರ್ಕಾರ ನೊಂದವರ ಪರವಾಗಿ ಕಾರ್ಯನಿರ್ವಹಿಸಲಿದೆ" ಎಂದು ಭರವಸೆ ನೀಡಿದರು.
"ಈ ವಿಷಯಕ್ಕೆ ಸಂಬಂಧಿಸಿದಂತೆ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದ್ದು, ಅರ್ಹರಿಗೆ ಹಕ್ಕುಪತ್ರ ನೀಡುವ ಕುರಿತು ಈಗಾಗಲೇ ಅನೇಕ ಬಾರಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ" ಎಂದು ಮಧು ಬಂಗಾರಪ್ಪ ತಿಳಿಸಿದರು.
ಅಡಿಕೆ ಹಾನಿಕಾರಕವಲ್ಲ: ಸಚಿವ ಮಧು ಬಂಗಾರಪ್ಪ ಅಡಿಕೆ ಬೆಳೆಗಾರರ ಸಮಸ್ಯೆಯ ಕುರಿತು ಮಾತನಾಡಿದರು. "ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಾಗೂ ಪರಂಪರಾಗತವಾಗಿ ಅಡಿಕೆ ಬೆಳೆಯನ್ನು ತಮ್ಮ ಜೀವನಾಧಾರ ಬೆಳೆಯನ್ನಾಗಿ ಬೆಳೆಸಿಕೊಂಡು ಬರಲಾಗುತ್ತಿದೆ" ಎಂದರು.
"ಅಡಿಕೆಯ ಕ್ಷೇತ್ರವ್ಯಾಪ್ತಿ ಪ್ರತಿವರ್ಷ ಹೆಚ್ಚಾಗುತ್ತಲೇ ಇದೆ. ಕೆಲವು ವರ್ಷಗಳ ಹಿಂದೆ ಅಡಿಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕವೆಂದು ಸಂಸ್ಥೆಯೊಂದು ವರದಿ ನೀಡಿತ್ತು. ಈ ವರದಿ ಸ್ಪಷ್ಟತೆಯಿಂದ ಕೂಡಿಲ್ಲ. ಬದಲಾಗಿ ಅಡಿಕೆ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ಹಾನಿಕಾರಕವಲ್ಲ. ರಾಜ್ಯ ಸರ್ಕಾರವು ಅಡಿಕೆ ಬೆಳೆಗಾರರ ಸಂರಕ್ಷಣೆಗೆ ಬದ್ದವಾಗಿದೆ. ಕೇಂದ್ರ ಸರ್ಕಾರವೂ ಕೂಡ ಈ ಬಗ್ಗೆ ರೈತರ ಪರವಾಗಿ ಇರಬೇಕು" ಎಂದು ಸಚಿವರು ಹೇಳಿದರು.












Click it and Unblock the Notifications