Shivamogga airport; ಉದ್ಘಾಟನೆಗೆ ಕನ್ನಡದಲ್ಲಿ ಕೇಂದ್ರ ಸಚಿವರ ಆಹ್ವಾನ
ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಬನ್ನಿ ಎಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಕನ್ನಡದಲ್ಲಿ ಟ್ವೀಟ್ ಮಾಡಿ ಜನರನ್ನು ಆಹ್ವಾನಿಸಿದ್ದಾರೆ.
ಶಿವಮೊಗ್ಗ, ಫೆಬ್ರವರಿ 22; ಮಲೆನಾಡಿನ ಜನರ ಬಹುವರ್ಷಗಳ ಕನಸು ನನಸಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಾಜ್ಯದ ಜನರನ್ನು ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ರಾಜ್ಯದ ಜನರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. 'ಕರ್ನಾಟಕದ ಜನರೇ, ನಿಮ್ಮ ಭೂಮಿಗೆ 148ನೇ ವಿಮಾನ ನಿಲ್ದಾಣ ದೊರೆಯುತ್ತಿದ್ದು, ಬನ್ನಿ ನಮ್ಮೊಂದಿಗೆ ಕೈಜೋಡಿಸಿ' ಎಂದು ಸಚಿವರು ಹೇಳಿದ್ದಾರೆ.
ಧನ್ಯವಾದ ಹೇಳಿದ ಸಂಸದರು; ಜ್ಯೋತಿರಾಧಿತ್ಯ ಸಿಂಧಿಯಾ ಟ್ವೀಟ್‌ಗೆ ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕರ್ನಾಟಕದ ಜನರೇ, ನಿಮ್ಮ ಭೂಮಿಗೆ 148 ನೇ ವಿಮಾನ ನಿಲ್ದಾಣ ದೊರೆಯುತ್ತಿದ್ದು, ಬನ್ನಿ ನಮ್ಮೊಂದಿಗೆ ಕೈಜೋಡಿಸಿ 🇮🇳 ✈️ https://t.co/L22OQaCgUI
— Jyotiraditya M. Scindia (@JM_Scindia) February 22, 2023
'ಕೇಂದ್ರದ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ ಅವರು ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ದೊರೆತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ಜನತೆಯ ಪರವಾಗಿ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಬಿ. ವೈ. ರಾಘವೇಂದ್ರ ಟ್ವೀಟ್ ಮಾಡಿದ್ದಾರೆ.

ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳವಾರ ದೆಹಲಿಯಿಂದ ವಾಯುಪಡೆಯ ಬೋಯಿಂಗ್ 737 ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ಹಾರಾಟದ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದೆ. ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮತ್ತು ಟೇಕಾಫ್ ಆಗಿದೆ.
ಪ್ರಧಾನಿ ಮತ್ತು ರಾಷ್ಟ್ರಪತಿಗಳ ವಿದೇಶ ಪ್ರವಾಸ ತೆರಳುವಾಗ ಏರ್ ಇಂಡಿಯಾ ಒನ್ ಎಂಬ ಐಷಾರಾಮಿ ವಿಮಾನ ಬಳಕೆ ಮಾಡುತ್ತಾರೆ. ದೇಶದಲ್ಲಿ ಪ್ರವಾಸಕ್ಕೆ ಬೋಯಿಂಗ್ 737 ವಿಮಾನ ಬಳಕೆ ಮಾಡುತ್ತಾರೆ.
ಫೆಬ್ರವರಿ 27ರಂದು ನರೇಂದ್ರ ಮೋದಿ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕು. ಅದಕ್ಕಾಗಿ ಪರೀಕ್ಷಾರ್ಥವಾಗಿ ಬೋಯಿಂಗ್ 737 ವಿಮಾನವನ್ನು ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇಯಲ್ಲಿ ಲ್ಯಾಂಡ್ ಮಾಡಿ, ಬಳಿಕ ಟೇಕ್‌ಆಫ್ ಮಾಡಲಾಗಿದೆ.
ಉಡಾನ್ ಯೋಜನೆಗೆ ಸೇರ್ಪಡೆ; ಶಿವಮೊಗ್ಗ ವಿಮಾನ ನಿಲ್ದಾಣವನ್ನು UDAN-4.2 ಯೋಜನೆ ಅಡಿಯಲ್ಲಿ ಸೇರಿಸಬೇಕು ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈಗಾಗಲೇ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ದೇಶದ ಮಹಾನಗರಗಳಿಗೆ ಶಿವಮೊಗ್ಗದಿಂದ ವಿಮಾನ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ 11 ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಬೇಕು ಎಂದು ಸಹ ಜ್ಯೋತಿರಾಧಿತ್ಯ ಸಿಂಧಿಯಾಗೆ ಮನವಿ ಮಾಡಲಾಗಿದೆ.
ವ್ಯಾಪಾರ ಹಾಗೂ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಬೇಕು ಎಂದು ಮಾರ್ಗಗಳ ವಿವರಣೆ ನೀಡಲಾಗಿದೆ.
ಮುಂಬೈ-ಶಿವಮೊಗ್ಗ-ಮುಂಬೈ, ಮುಂಬೈ-ಶಿವಮೊಗ್ಗ-ಮಂಗಳೂರು, ಮುಂಬೈ-ಶಿವಮೊಗ್ಗ-ಚೆನ್ನೈ, ಮುಂಬೈ-ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಕಲಬುರಗಿ-ಹೈದರಾಬಾದ್, ಶಿವಮೊಗ್ಗ-ಕಲಬುರಗಿ-ದೆಹಲಿ, ಬೆಂಗಳೂರು-ಶಿವಮೊಗ್ಗ-ಬೆಳಗಾವಿ, ಬೆಂಗಳೂರು-ಶಿವಮೊಗ್ಗ-ದೆಹಲಿ ಮತ್ತು ಬೆಂಗಳೂರು-ಶಿವಮೊಗ್ಗ-ಗೋವಾ ಹಾಗೂ ಹೈದರಾಬಾದ್-ಶಿವಮೊಗ್ಗ-ಕೊಚ್ಚಿನ್, ಮಾರ್ಗದಲ್ಲಿ ವಿಮಾನ ಸಂಚಾರಕ್ಕೆ ಮನವಿ ಮಾಡಲಾಗಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸಾಗಿತ್ತು. 2019ರಲ್ಲಿ ಮುಖ್ಯಮಂತ್ರಿಯಾದ ಬಳಿಕ ಅವರು ವಿಮಾನ ನಿಲ್ದಾಣ ಯೋಜನೆ ಚುರುಕುಗೊಳಿಸಿದ್ದರು.
ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣಕ್ಕೆ ಬಿ. ಎಸ್. ಯಡಿಯೂರಪ್ಪ ಹೆಸರು ಇಡಲು ಚಿಂತನೆ ನಡೆಸಿತ್ತು. ಆದರೆ ಯಡಿಯೂರಪ್ಪ ಅದನ್ನು ನಿರಾಕರಿಸಿ ರಾಷ್ಟ್ರಕವಿ ಕುವೆಂಪು ಹೆಸರು ಇಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸರ್ಕಾರವೂ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.












Click it and Unblock the Notifications