ಶಿವಮೊಗ್ಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ ನಿಧನ
ಶಿವಮೊಗ್ಗ, ಆಗಸ್ಟ್ 18: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ(104) ಮಂಗಳವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಹುಚ್ಚರಾಯಪ್ಪ ಬ್ರಿಟಿಷರ ವಿರುದ್ಧ 1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಸೆರೆಮನೆ ವಾಸವನ್ನು ಅನುಭವಿಸಿದ್ದರು.
ಈಸೂರು ಸ್ವಾತಂತ್ರ್ಯ ಹೋರಾಟವು ಭಾರತದ ಇತಿಹಾಸದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದು, ಸ್ವಾತಂತ್ರ್ಯ ಪಡೆದ ಭಾರತದ ಮೊದಲ ಗ್ರಾಮವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಹುಚ್ಚರಾಯಪ್ಪ ಅನೇಕ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಈಸೂರು ದಂಗೆಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಮೃತರಾಗಿದ್ದು, ಇವರು ಕೊನೆಯವರಾಗಿದ್ದಾರೆ. ಇಂದು ಹುಚ್ಚರಾಯಪ್ಪ ಮೃತರಾಗಿದ್ದು, ಈಸೂರು ದಂಗೆ ಹೋರಾಟಗಾರರ ಕೊನೆಯ ಕೊಂಡಿ ಕಳಚಿಕೊಂಡಿದೆ.

ಹುಚ್ಚರಾಯಪ್ಪ ಅವರಿಗೆ ಅನೇಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ. ಹುಚ್ಚರಾಯಪ್ಪನವರಿಗೆ ನಾಲ್ಕು ಜನ ಮಕ್ಕಳು ಇದ್ದು, ಇಡೀ ಈಸೂರು ಗ್ರಾಮ ಇವರ ಸಾವಿನಿಂದ ಮೌನಕ್ಕೆ ಶರಣಾಗಿದೆ.












Click it and Unblock the Notifications