ಯುವನಿಧಿ ಯೋಜನೆಗೆ ಒಂದು ವರ್ಷ: ಉದ್ಯೋಗ ಮೇಳ ಆಯೋಜನೆ
ಶಿವಮೊಗ್ಗ, ಡಿಸೆಂಬರ್ 23: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 5ನೇ ಗ್ಯಾರಂಟಿ ಯೋಜನೆ 'ಯುವನಿಧಿ'. ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ಜನವರಿ 12, 2023ರಂದು ಚಾಲನೆ ನೀಡಲಾಗಿತ್ತು. ಯೋಜನೆಗೆ ಚಾಲನೆ ಸಿಕ್ಕಿ ಒಂದು ವರ್ಷ ಆದ ಹಿನ್ನಲೆಯಲ್ಲಿ ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗುತ್ತಿದೆ.
ಸೋಮವಾರ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ. ಎಸ್. ಚಂದ್ರಭೂಪಾಲ ಮಾತನಾಡಿದರು.

"ಯುವ ನಿಧಿ ಯೋಜನೆ ಚಾಲನೆಗೊಂಡು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗುವುದು" ಎಂದು ಸಿ. ಎಸ್. ಚಂದ್ರಭೂಪಾಲ ಹೇಳಿದರು.
ಉದ್ಯೋಗ ಮೇಳ ಆಯೋಜನೆ: ಸಿ. ಎಸ್. ಚಂದ್ರಭೂಪಾಲ ಮಾತನಾಡಿ, "ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕೌಶಲ್ಯ ಅಭಿವೃದ್ದಿ ನಿಗಮದ ಜೊತೆಗೆ ವಿವಿಧ ತರಬೇತಿ ಪಡೆಯಲು ಯುವನಿಧಿ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ" ಎಂದರು.
"ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ವಿವಿಧ ತಾಂತ್ರಿಕ ತರಬೇತಿ ಉದ್ಯೋಗ ಹೊಂದಲು ಎಲ್ಲಾ ಫಲಾನುಭವಿಗಳಿಗೆ ಇಮೇಲ್ ಮುಖಾಂತರ ಮಾಹಿತಿ ನೀಡಲಾಗಿದೆ. ಯುವ ನಿಧಿ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು. ಹಾಗೂ ಮುಂದಿನ ದಿನಗಳಲ್ಲಿ ಉದ್ಯೋಗ ಮೇಳವನ್ನೂ ಆಯೋಜಿಸಲು ಚಿಂತಿಸಲಾಗುತ್ತಿದೆ" ಎಂದು ಹೇಳಿದರು.
ಶಿವಮೊಗ್ಗ ನಗರದ ಫ್ರೀಡಂಪಾರ್ಕ್‍ನಲ್ಲಿ ಜನವರಿ 12, 2023ರಂದು ಯುವನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಚಾಲನೆ ನೀಡಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಯಾವ ಸಮಾಜ ಹಸಿದವರಿಗೆ ಅನ್ನ ನೀಡುವದಿಲ್ಲವೋ ಅಂತಹ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರ ಜನ್ಮದಿನದಂದು ಯುವಕ/ ಯುವತಿಯರು ಸಾಮಾಜಿಕ, ಆರ್ಥಿಕವಾಗಿ ಭ್ರಮನಿರಸವಾಗಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಯುವನಿಧಿ ಕಾರ್ಯಕ್ರಮ ಮೂಲಕ ಶಕ್ತಿ ತುಂಬುವ ಕಾರ್ಯ ಪ್ರಾರಂಭಿಸಲಾಗಿದೆ" ಎಂದು ಹೇಳಿದ್ದರು.
"ಯುವನಿಧಿ ಮೂಲಕ ಭತ್ಯೆ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗ ಮೇಳದ ಮೂಲಕ ಕೆಲಸ ಕೊಡಿಸುವ ಕಾರ್ಯವನ್ನೂ ಮಾಡುತ್ತೇವೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. 2022-23ರಲ್ಲಿ 3.96 ಲಕ್ಷ ವಿದ್ಯಾರ್ಥಿಗಳು ಪದವಿ ಹಾಗೂ 18 ಲಕ್ಷ ವಿದ್ಯಾರ್ಥಿಗಳು ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ಯೋಜನೆಯಡಿ ನೋಂದಾಯಿಸಿಕೊಂಡು ಯುವನಿಧಿ ಸೌಲಭ್ಯ ಪಡೆಯಬೇಕು" ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದರು.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದು 'ಯುವನಿಧಿ'. ಯೋಜನೆಯಡಿ ಪದವಿ ಉತ್ತೀರ್ಣರಾದವರಿಗೆ ರೂ. 3,000 ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ರೂ. 1,500 ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಯೋಜನೆಯ ಪ್ರಯೋಜನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು 2023ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾಗಿಬೇಕು. ಪದವಿ, ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿರಬಾರದು. ಸ್ವಯಂ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು. ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ, ಡಿಪ್ಲೋಮಾ ತನಕ ಅಧ್ಯಯನ ಮಾಡಿರಬೇಕು).
ಯೋಜನೆಯ ಪ್ರಯೋಜನ ಪಡೆಯುತ್ತಿರುವವರು ಪ್ರತಿ ತಿಂಗಳು 25ನೇ ತಾರೀಖಿನ ಒಳಗಾಗಿ ಸ್ವಯಂ ದೃಢೀಕೃತ ನಿರುದ್ಯೋಗಿ ಪ್ರಮಾಣ ಪತ್ರವನ್ನು ಪೋರ್ಟಲ್ ಅನ್ನು ಅಪ್‍ಲೋಡ್ ಮಾಡುವುದು ಕಡ್ಡಾಯ.












Click it and Unblock the Notifications