Muniratna: ಮುನಿರತ್ನಾಗೆ ಗುಂಡಿಟ್ಟು ಹೊಡೆದು ಸಾಯಿಸಬೇಕು- ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ ಸೆಪ್ಟೆಂಬರ್ 24: ಮುಡಾ ಹಗರಣ ಪ್ರಕರಣದ ತನಿಖೆಗೆ ಸಹಕರಿಸಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪಟ್ಟು ಹಿಡಿದ ಬೆನ್ನಲ್ಲೆ ಕಮಲ ಕಲಿಗಳ ವಿರುದ್ಧ ಕೈ ನಾಯಕರು ಮುಗಿಬಿದ್ದಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, 'ಬಿಟ್ ಕಾಯಿನ್ ಹಗರಣದಲ್ಲಿ ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ಯಾರ ವಿರುದ್ಧ ತನಿಖೆಯಾಗಬೇಕೆಂಬ ತೀರ್ಮಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಮುಡಾ ಪ್ರಕರಣದಲ್ಲಿ ನಮ್ಮ ಮುಖ್ಯಮಂತ್ರಿಗಳ ಹೆಸರು ತಂದಿದ್ದಾರೆ. ನಮ್ಮ ಪಕ್ಷದ ವಿರುದ್ಧ ಡ್ಯಾಮೇಜ್ ಮಾಡುವ ಕೆಲಸ ಮಾಡಿದ್ದಾರೆ. ಈಗ ಅವರ ಹೆಸರು ಇಂತಹ ಕೇಸಿನಲ್ಲಿ ಬಂದರೆ ಸುಮ್ಮನೆ ಬಿಡಲು ಆಗುತ್ತಾ? ಎಂದು ಅವರು ಪ್ರಶ್ನೆ ಮಾಡಿದರು.

ಆರಗ ಜ್ಞಾನೇಂದ್ರಗೆ ಸುಮ್ಮನೆ ಬಿಡಲು ಆಗುತ್ತಾ? ಅವರು ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿಲ್ವಾ? ಅದೇ ರೀತಿ ಅವರ ವಿರುದ್ಧ ತನಿಖೆ ಮಾಡಿಯೇ ಮಾಡ್ತಿವಿ. ಬಿಟ್ ಕಾಯಿನ್ ವಿಚಾರದಲ್ಲಿ ಅವರ ಹೆಸರು ಬಂದರೆ ತನಿಖೆ ಮಾಡಿಯೇ ಮಾಡ್ತಿವಿ. ಜನರಿಗೆ ಇವರ ಬಗ್ಗೆ ಗೊತ್ತಾಗಬೇಕಲ್ವಾ? ಇವರು ದ್ವೇಷದ ರಾಜಕಾರಣ ಮಾಡಿದ್ರೆ ನಾವು ತನಿಖೆ ಮಾಡಿಸ್ತಿವಿ ಎಂದ ಗೋಪಾಲಕೃಷ್ಣ ಸೇಡಿಗೆ ಸವಾ ಸೇಡು ಎಂದಿದ್ದಾರೆ.
'ಮುನಿರತ್ನಾಗೆ ಗುಂಡಿಟ್ಟು ಹೊಡೆದು ಸಾಯಿಸಬೇಕು'
ಒಂದೊಂದೆ ತನಿಖೆಯಾಗುತ್ತಿದೆ. ಈಗ ಮುನಿರತ್ನ ಸಿಕ್ಕಿಬಿದ್ದ. ಅವನ ರೀತಿ ನೀಚ ಮನುಷ್ಯ ಮತ್ತೊಬ್ಬ ಇಲ್ಲ. ಏಡ್ಸ್ ರೋಗಿಯ ರಕ್ತ ಚುಚ್ಚುಮದ್ದು ತೊಗೊಂಡು ಸಾಯಿಸಲು ಹೊರಟರೆ ಹೇಗೆ? ಇವನಿಗೆ ಗುಂಡಿಟ್ಟು ಹೊಡಿಯಬೇಕು. ಅವನಿಗೆ ಬಿಡಬಾರದು, ಮೊದಲು ಗುಂಡೇಟು ಹೊಡೆದು ಸಾಯಿಸಬೇಕು ಅವನಿಗೆ. ಇಂತಹ ಕೆಟ್ಟ ಹುಳಗಳು ರಾಜ್ಯದಲ್ಲಿ, ರಾಜಕಾರಣದಲ್ಲಿ ಇರಬಾರದು. ಕೆಟ್ಟ ಮನಸ್ಥಿತಿ ಇರುವವರು ಇಲ್ಲಿರಬಾರದು. ರಾಜ್ಯ ಸರ್ಕಾರ ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಮೇಲೆ ಪೋಕ್ಸೋ ಕೇಸಿದೆ. ಯಡಿಯೂರಪ್ಪ ಹಿಂದೆ ಜೈಲಿಗೆ ಹೋಗಿ ಬಂದಿಲ್ವಾ. 136 ಸೀಟು ನಾವು ಬಂದ ಮೇಲೆ ಅವರಿಗೆ ತಡೆದುಕೊಳ್ಳಲು ಆಗ್ತಿಲ್ಲ. ಬಿಜೆಪಿಯವರು ವಿಲ, ವಿಲ ಒದ್ದಾಡುತ್ತಿದ್ದಾರೆ. ಏನಾದ್ರೂ ಮಾಡಿ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಅವರ ಮನಸ್ಥಿತಿಯಾಗಿದೆ. ಸರ್ಕಾರ ಬೀಳಿಸಬೇಕೆಂದು ಹೊರಟಿದ್ದಾರೆ. ಅವರ ಕನಸು, ಮನಸ್ಸಿನಲ್ಲೂ ಸರ್ಕಾರ ಬೀಳಿಸಲು ಆಗಲ್ಲ. ನಾವು 136 ಜನ ಸ್ಟ್ರಾಂಗ್ ಆಗಿದಿವಿ. ಯಾವ ಸರ್ಕಾರವನ್ನು ಬೀಳಿಸಲು ಆಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಗರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಾಕ್ಸಮರಕ್ಕೆ ಇದು ಕಾರಣವಾಗಿದೆ.












Click it and Unblock the Notifications