ಹವಾಮಾನ ಬದಲಾವಣೆ ನಿರ್ವಹಣೆ: ವೈಜ್ಞಾನಿಕ ಕ್ರಿಯಾ ಯೋಜನೆ ಅಗತ್ಯ
ಶಿವಮೊಗ್ಗ, ಮೇ 21: ಹವಾಮಾನ ಬದಲಾವಣೆ ಕುರಿತು ಹಲವು ವೇದಿಕೆಗಳಲ್ಲಿ ಚರ್ಚೆಗಳು ನಡೆಯುತ್ತವೆ. ಇದನ್ನು ಎದುರಿಸಲು ಪರಿಣಾಮಕಾರಿ ಕ್ರಮಗಳು ಅಗತ್ಯ ಎಂದು ಸಹ ತಜ್ಞರು ಹೇಳಿದ್ದಾರೆ. ಈಗಾಗಲೇ ಹವಾಮಾನ ಬದಲಾವಣೆ ಕಾರಣ ಅತಿಯಾದ ಬಿಸಿಲು, ಅಕಾಲಿಕ ಮಳೆಯನ್ನು ಎದುರಿಸುತ್ತಿದ್ದೇವೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಇವರ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 'ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ರಾಜ್ಯ ಕ್ರಿಯಾ ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸುಜಾತ, "ಪರಿಸರದ ಮೇಲಾಗುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಜ್ಞಾನಿಕ ಕ್ರಿಯಾ ಯೋಜನೆಗಳು ಹಾಗೂ ಸರಳ ಜೀವನ ನಮ್ಮದಾಗಿಸಿಕೊಳ್ಳುವ ಅವಶ್ಯಕತೆ ಇದೆ" ಎಂದು ಹೇಳಿದರು.

"ಪರಿಸರದ ಮೇಲಾಗುತ್ತಿರುವ ನಿರಂತರ ಒತ್ತಡ ಹಾಗೂ ಪರಿಸರ ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು ಇದರಿಂದ ಮಾನವನ ಜೀವನದ ಮೇಲೆ ಅನೇಕ ದುಷ್ಟರಿಣಾಮಗಳೂ ಆಗುತ್ತಿದೆ. ಇದಕ್ಕೆಲ್ಲ ಕಾರಣ ನಾವೇ ಆಗಿದ್ದು, ಕೈಗಾರಿಕೆಗಳು ಸೇರಿದಂತೆ ಮನುಷ್ಯ ಕೈಗೊಳ್ಳವ ಅನೇಕ ಪ್ರಕ್ರಿಯೆಗಳಿಂದ ಪರಿಸರ ಮಾಲಿನ್ಯ, ಅಸಮತೋಲನ ಉಂಟಾಗುತ್ತಾ ಬಂದಿದೆ" ಎಂದು ತಿಳಿಸಿದರು.
"ಪ್ರಕೃತಿಯ ವಿರುದ್ದ ಹೋಗುತ್ತಿದ್ದೇವೆ. ಅತಿಯಾದ ಕೈಗಾರಿಕೋದ್ಯಮ, ರಾಸಾಯನಿಕಗಳ ಬಳಕೆಯಿಂದ ಗ್ಲೋಬಲ್ ವಾರ್ಮಿಂಗ್ ಆಗುತ್ತಿದೆ. ಇಡೀ ಭೂಮಿ ಸುಡುವಷ್ಟು ಸ್ಪೋಟಕ ನಮ್ಮಲ್ಲಿದೆ. ಹಳ್ಳಿಗಳಲ್ಲೂ ಸಾಕಷ್ಟು ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರಕವಾಗಲಿದೆ" ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, "ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ" ಎಂದು ಹೇಳಿದರು.
ಹವಾಮಾನ ಬದಲಾವಣೆಗಾಗಿ ರಾಜ್ಯ ನೋಡಲ್ ಏಜೆನ್ಸಿಯಾಗಿ ಹವಾಮಾನ ಬದಲಾವಣೆಯ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಈ ಸಂಸ್ಥೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹವಾಮಾನ-ಹೊಂದಾಣಿಕೆಯ ಯೋಜನೆಯ ತಯಾರಿಕೆ ಮತ್ತು ಹವಾಮಾನ-ಸಂಬಂಧಿತ ತರಬೇತಿ ಕಾರ್ಯಗಾರವನ್ನು ನಡೆಸುತ್ತಿದ್ದು, ಹವಾಮಾನ ಬದಲಾವಣೆಯ ಪರಿಗಣನೆಗಳನ್ನು ರಾಜ್ಯ ಮಟ್ಟದ ನೀತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಂಯೋಜಿಸುವ ಮೂಲಕ ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಪ್ರಯತ್ನಗಳನ್ನು ಇದು ಬೆಂಬಲಿಸುತ್ತದೆ.
ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ನೀರು, ಇಂಧನ, ಸಾರಿಗೆ, ಕೈಗಾರಿಕೆಗಳು, ತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ ಎಂಬ ಹತ್ತು ಪ್ರಮುಖ ವಲಯಗಳಲ್ಲಿ ಈ ಕ್ರಿಯಾ ಯೋಜನೆ 200 ಕ್ರಿಯಾ ಅಂಶಗಳನ್ನು ವಿವರಿಸುತ್ತದೆ. ಹವಾಮಾನ ಅಪಾಯಗಳಿಗೆ ಪ್ರತಿಕ್ರಿಯೆಯಾಗಿ ಹೊಂದಾಣಿಕೆ ಮತ್ತು ಅಪಾಯಗಳ ತಗ್ಗಿಸುವಿಕೆಯ ಪ್ರಯತ್ನಗಳೆರಡನ್ನೂ ಮಾರ್ಗದರ್ಶನ ಮಾಡಲು ಈ ಕ್ರಿಯಾ ಅಂಶಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಾರ್ಯಾಗಾರದಲ್ಲಿ ಚರ್ಚೆಗಳು ನಡೆದವು.












Click it and Unblock the Notifications