Vande Bharat; ಡಿಸೆಂಬರ್‌ನಲ್ಲಿ ಶಿವಮೊಗ್ಗ-ಬೆಂಗಳೂರು ರೈಲು?
ಶಿವಮೊಗ್ಗ, ಸೆಪ್ಟೆಂಬರ್ 07; ಕರ್ನಾಟಕದಲ್ಲಿ ಸದ್ಯ ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಎರಡು ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಹಲವು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ.
ರಾಜ್ಯದಲ್ಲಿ ವಂದೇ ಭಾರತ್ ರೈಲಿಗೆ ಬೇಡಿಕೆ ಇರುವ ಮಾರ್ಗದಲ್ಲಿ ಬೆಂಗಳೂರು- ಶಿವಮೊಗ್ಗ ಸಹ ಒಂದು. ರಾಜಧಾನಿ ಬೆಂಗಳೂರು ಮತ್ತು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಡುವೆ ವಿಮಾನ, ಬಸ್, ಜನಶತಾಬ್ದಿ ರೈಲಿನ ಮೂಲಕ ಸಂಚಾರ ನಡೆಸಬಹುದು.

ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಈಗಾಗಲೇ ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕದ 10 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ನಡೆಲಿದ್ದು, ಬೆಂಗಳೂರು-ಶಿವಮೊಗ್ಗ ಸಹ ಇದರಲ್ಲಿ ಸೇರಿದೆ.
ಡಿಸೆಂಬರ್ ವೇಳೆಗೆ ರೈಲು?; ಸಂಸದ ಬಿ. ವೈ. ರಾಘವೇಂದ್ರ ಬೆಂಗಳೂರು-ಶಿವಮೊಗ್ಗ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಮಾತನಾಡಿದ್ದಾರೆ. "ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆಗೆ ಕೂಡ ಮನ್ನಣೆ ಸಿಗುವ ಸಾಧ್ಯತೆ ಇದೆ. ವಂದೇ ಭಾರತ್ ರೈಲಿನ ಅಗತ್ಯಗಳಲ್ಲಿ ವಿದ್ಯುತ್ ಲೇನ್ ಪ್ರಮುಖವಾದದ್ದು" ಎಂದು ಹೇಳಿದ್ದಾರೆ.
"ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಜನ ಶತಾಬ್ದಿ ರೈಲು ಎಲೆಕ್ಟ್ರಿಕ್ ಇಂಜಿನ್ ಮೂಲಕವೇ ಸಂಚಾರ ನಡೆಸುತ್ತಿದೆ. ಡಿಸೆಂಬರ್ ವೇಳೆಗೆ ವಂದೇ ಭಾರತ್ ಶಿವಮೊಗ್ಗಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ" ಎಂದು ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.
ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ನೈಋತ್ಯ ರೈಲ್ವೆಯ ಸುತ್ತೋಲೆಯೊಂದು ವೈರಲ್ ಆಗಿತ್ತು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ಬೇಕಾದ ಮೂಲಸೌಕರ್ಯ ಒದಗಿಸಲು ಹೊರಡಿಸಿರುವ ಸುತ್ತೋಲೆ ಇದಾಗಿತ್ತು. ಇದರಲ್ಲಿ ಕರ್ನಾಟಕದಲ್ಲಿ 10 ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲಾಗುತ್ತದೆ ಎಂಬ ಮಾಹಿತಿ ಇತ್ತು.
ಬೆಂಗಳೂರು-ಶಿವಮೊಗ್ಗ ಮಾರ್ಗವೂ ಈ ಸುತ್ತೋಲೆಯಲ್ಲಿ ಸೇರಿತ್ತು. ಎಲೆಕ್ಟ್ರಿಕ್ ಇಂಜಿನ್ ಮೂಲಕ ಸಾಗುವ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ರೈಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕಿದೆ. ಬೆಂಗಳೂರು-ಶಿವಮೊಗ್ಗ, ಮೈಸೂರು-ಶಿವಮೊಗ್ಗ ನಡುವೆ ಹಲವು ರೈಲು ಸಂಚಾರ ನಡೆಸುತ್ತವೆ. ಹಲವು ರೈಲು ಸಾಗರದ ತಾಳಗುಪ್ಪ ತನಕ ಓಡುತ್ತವೆ.
ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಆರಂಭಿಸಿದರೆ ಚಿತ್ರದುರ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಸಹ ಅನುಕೂಲವಾಗಲಿದೆ. ಈಗಾಗಲೇ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ದಾವಣಗೆರೆ ಮೂಲಕ ಸಾಗುತ್ತದೆ. ಆದರೆ ಪಕ್ಕದ ಜಿಲ್ಲೆ ಶಿವಮೊಗ್ಗಕ್ಕೆ ಇನ್ನೂ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿಲ್ಲ.
ಮೇ ತಿಂಗಳಿನಲ್ಲಿ ಬಿ. ವೈ. ರಾಘವೇಂದ್ರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ವಂದೇ ಭಾರತ್ ರೈಲನ್ನು ಜನ ಶತಾಬ್ದಿ ರೈಲುಗಳಿಗೆ ಪರ್ಯಾಯ ಎಂದು ಬಣ್ಣಿಸಲಾಗುತ್ತಿದೆ. ಯಶವಂತಪುರ-ಶಿವಮೊಗ್ಗ ನಡುವೆ ಶತಾಬ್ದಿ ರೈಲುಗಳು ಸಂಚಾರ ನಡೆಸುತ್ತದೆ. ಉಭಯ ನಗರಗಳ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಅನುಕೂಲವಾಗಲಿದೆ ಎಂದು ಮನವಿ ಸಲ್ಲಿಕೆ ಮಾಡಿದ್ದರು.
ಸಭೆಯಲ್ಲಿ ಅಧಿಕಾರಿಗಳು ಬೆಂಗಳೂರು-ಶಿವಮೊಗ್ಗ ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಲು ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದರು.












Click it and Unblock the Notifications