ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸಿದರೆ ಆಪರೇಷನ್ ಹಸ್ತ ಗ್ಯಾರಂಟಿ: ಬೇಳೂರು
ಶಿವಮೊಗ್ಗ, ಜೂನ್.20: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇದನ್ನು ಕೆಡವಲು ಬಿಜೆಪಿ ಯತ್ನಿಸಿದರೆ ಆಪರೇಷನ್ ಹಸ್ತ ಗ್ಯಾರಂಟಿ. ಪಕ್ಷದ ಜೊತೆಗೆ ಈಗಾಗಲೇ ಬಿಜೆಪಿಯ 7-8 ಜನ ಶಾಸಕರು ಇದ್ದಾರೆ.
ನನ್ನ ಬಳಿಯೇ 3 ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲ ಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ಅಧಿಕಾರದ ಕನಸು ಕಾಣುತ್ತಿದೆ. ಕಾಂಗ್ರೆಸ್ ನನಗೆ ಏನಾದರೂ ಆಪರೇಷನ್ ನಡೆಸಲು ಅವಕಾಶ ಕೊಟ್ಟರೆ ಬಿಜೆಪಿಯ 7-8 ಜನ ಶಾಸಕರನ್ನು ಕರೆ ತರುತ್ತೇನೆ.

ಈಗಾಗಲೇ ನನ್ನ ಜೊತೆಗೆ ಮೂವರು ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಸ್ವಲ್ಪ ದಿನ ಕಾಯ್ತಾ ಇರಿ ಬಿಜೆಪಿಗೆ ಹೋದ ಅಷ್ಟು ಜನ ಕಾಂಗ್ರೆಸಿಗರು ಮತ್ತೆ ಮರಳಿ ತಮ್ಮ ಪಕ್ಷಕ್ಕೆ ಮರಳಲಿದ್ದಾರೆ ಎಂದು ಮುನ್ಸೂಚನೆ ನೀಡಿದರು.
ನಾನು ಬಂಗಾರಪ್ಪ ಹಾಗೂ ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದವನು. ಈ ಹಿಂದೆ ಆಪರೇಷನ್ ಕಮಲ ನಡೆಸುವಾಗ ಆ ಪಕ್ಷದಲ್ಲಿಯೇ ಇದ್ದೆ. ಹಾಗಾಗಿ ಆಪರೇಷನ್ ನಡೆಸುವ ಕಲೆಯನ್ನ ಬಿಎಸ್ ವೈ ಕಲಿಸಿ ತೋರಿಸಿಕೊಟ್ಟಿದ್ದಾರೆ. ಅದನ್ನ ಅವರಿಗೆ ತಿರುಗಿಸುತ್ತೇನೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ. ಬಿಎಸ್ ವೈ ಸರ್ಕಾರ ಬೀಳಲಿದೆ ಎಂದು ಕನಸು ಕಾಣ್ತಾ ಇದ್ದಾರೆ. ಅವರಿಗೆ ಹುಳಿ ಸಿಗಲಿದೆ. ಸಿಹಿ ಸಿಗೋದಿಲ್ಲ.
ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿಬಂದ ಮೊದಲ ಮುಖ್ಯಮಂತ್ರಿ ಬಿಎಸ್ ವೈ ಆಗಿದ್ದಾರೆ. ಬಿಎಸ್ ವೈಗೆ ಮಾನ ಮರ್ಯಾದೆ ಇಲ್ಲ. 79 ಸೀಟು ಬಂದಾಗ ಈ ಹಿಂದೆ ಜೆಡಿಎಸ್ ಕೈಕಾಲು ಹಿಡಿದು ಉಪ ಮುಖ್ಯಮಂತ್ರಿಗಳಾದರು. ಅವರಿಗೆ ಹತಾಶೆ ಮನೋಭಾವ ಉಂಟಾಗಿದೆ. ಹಾಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications