ಡಿ.18ರಿಂದ ಮೈಸೂರಿನ ಕೈಮಗ್ಗ ಮೇಳದಲ್ಲಿ ರೇಷ್ಮೆ ಸೀರೆಗಳ ಕಮಾಲ್
ಮೈಸೂರು, ಡಿಸೆಂಬರ್ 18: ಮಾನಿನಿಯರ ಮನಸೆಳೆಯುವ ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಜಿವರಮ್ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮ ಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರಪ್ರದೇಶದ ಬನಾರಸ್ ಸೀರೆ, ಚಿಕನ್ ಎಂಬ್ರಾಯ್ಡಿರಿ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆಗಳು ಮೈಸೂರಿನ ಜೆಎಸ್ಎಸ್ ಅರ್ಬನ್ ಹಾತ್‌ನಲ್ಲಿ ಸಿಗುತ್ತವೆ.
ಅಷ್ಟೇ ಅಲ್ಲದೆ ಒರಿಸ್ಸಾ ರಾಜ್ಯದ ಸಂಬಲ್‌ಪುರಿ ಸೀರೆ, ಇಕ್ಕತ್, ಬೊಂಕಾಯಿ ಸೀರೆ, ಕಾಶ್ಮೀರ ರಾಜ್ಯದ ಪಶ್ಮಿನಾ ಶಾಲ್, ಆಂಧ್ರಪ್ರದೇಶದ ಗೊದ್‌ವಾಲ್ ರೇಷ್ಮೇ ಸೀರೆ, ಕಲ್ಮಕಾರಿ ಸೀರೆ, ಪೊಚಂಪಲ್ಲಿ ಸೀರೆಗಳು ಮತ್ತು ಮಧುರೈ ಟೈ ಅಂಡ್ ಡೈ, ಗುಜರಾತ್ ರಾಜ್ಯದ ಪಟೋಲ ರೇಷ್ಮೆ ಸೀರೆಗಳು ಹೀಗೆ ಹಲವು ವಿಶೇಷತೆಗಳ ಸೀರೆಗಳು ಒಂದೇ ಸೂರಿನಡಿ ದೊರೆಯುವಂತೆ ಮಾಡುವ ಉದ್ದೇಶದಿಂದ ಮೈಸೂರಿನ ಜೆಎಸ್ಎಸ್ ಅರ್ಬನ್ ಹಾತ್‌ನಲ್ಲಿ ವಿಶೇಷ ಕೈಮಗ್ಗ ಮೇಳ ಸಂಸ್ಕೃತಿ- 2021ನ್ನು ಆಯೋಜಿಸಲಾಗಿದೆ.
ಡಿ.18ರಿಂದ ವಿಶೇಷ ಕೈಮಗ್ಗ ಮೇಳ ಸಂಸ್ಕೃತಿ ಆರಂಭ
ಡಿ.18ರಿಂದ ಜ.2ರವರೆಗೆ ನಡೆಯುತ್ತಿರುವ ಈ ಮೇಳವನ್ನು ನೇಕಾರರು ಮತ್ತು ನೇಕಾರರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಹಾಗೂ ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡುವ ಸಲುವಾಗಿ ನವದೆಹಲಿಯ ಕೈಮಗ್ಗ ಜವಳಿ ಮಂತ್ರಾಲಯ ಮತ್ತು ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿಯು ಮೈಸೂರಿನ ಜೆಎಸ್ಎಸ್ ಅರ್ಬನ್ ಹಾತ್‌ನಲ್ಲಿ ವಿಶೇಷ ಕೈಮಗ್ಗ ಮೇಳ ಸಂಸ್ಕೃತಿ- 2021 ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಹಲವು ರೀತಿಯ ವಿಶೇಷತೆಗಳನ್ನು ಹೊಂದಿರುವುದು ಗಮನಾರ್ಹವಾಗಿದೆ.

ಉತ್ತರ ಭಾರತದ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರಗಿ ಮತ್ತು ಇಳಕಲ್ ಪ್ರದೇಶದ ಕೈಮಗ್ಗ ನೇಕಾರ ಸಹಕಾರಿ ಸಂಘಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ನೇಕಾರರು, ನೇಕಾರರ ಸಹಕಾರ ಸಂಘಗಳು ಮೇಳದಲ್ಲಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.

ಗಮನ ಸೆಳೆಯಲಿರುವ ರೇಷ್ಮೆ, ಕಾಟನ್ ಸೀರೆಗಳು
ಮೇಳದಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಇಲ್ಲಿ ರೇಷ್ಮೆ ಸೀರೆ ಮಾತ್ರವಲ್ಲದೆ, ಕಾಟನ್ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳು, ಕಸೂತಿ ವಸ್ತ್ರಗಳು, ಟವಲ್‌ಗಳು, ಮೇಲು ಹಾಸು ಮತ್ತು ಹೊದಿಕೆಗಳು, ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳು ಕೂಡ ಇರಲಿವೆ.
ಕೈಮಗ್ಗ ಮೇಳದ ಅವಧಿಯಲ್ಲಿ ಕೋವಿಡ್-19ನ ಸರ್ಕಾರದ ಹಾಗೂ ಆಡಳಿತ ಮಂಡಳಿಯ ನಿಯಮಗಳಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಾಗುತ್ತಿರುವುದಾಗಿ ಆಯೋಜಕರು ತಿಳಿಸಿದ್ದು, ಕೋವಿಡ್-19 ಲಾಕ್‌ಡೌನ್ ಸಡಿಸಿಲಿಸಿದ ನಂತರ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಆಯೋಜಿಸಿದ ಮೇಳಗಳು ಯಶಸ್ವಿಯಾಗಿರುವುದನ್ನು ಸ್ಮರಿಸಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ನೇಕಾರರ ಬದುಕು ಅತಂತ್ರವಾಗಿದ್ದು, ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿರುವ ನೇಕಾರರ ಕುಟುಂಬಗಳಿಗೆ ಉತ್ತೇಜಿಸಿ ಒಂದೇ ಸೂರಿನಡಿ ಮಾರುಕಟ್ಟೆಯನ್ನು ಕಲ್ಪಿಸಿ ವಿವಿಧ ಪ್ರಾಕಾರಗಳಿಗೆ ಕೈಮಗ್ಗ ಉತ್ಪನ್ನಗಳ ಅರಿವು ಮೂಡಿಸಿ ಉತ್ಪನ್ನಗಳನ್ನು ಬಳಸಲು ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿಕೊಡುವ ಉದ್ದೇಶ ಈ ಮೇಳದ್ದಾಗಿದೆ.











Click it and Unblock the Notifications