ಡಿಸೆಂಬರ್ 8ರಿಂದ ರಂಗಾಯಣ ಬಹುರೂಪಿ ರಂಗೋತ್ಸವ
ಮೈಸೂರು ನವೆಂಬರ್ 6: ರಂಗಾಯಣದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ನಡೆಯುವ ಬಹುರೂಪಿ ರಂಗೋತ್ಸವ ಈ ಬಾರಿ ಡಿಸೆಂಬರ್ 8 ರಿಂದ ಡಿಸೆಂಬರ್ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ಆಡಳಿತ ಮಂಡಳಿ ತಿಳಿಸಿದೆ.
ರಂಗಾಯಣದ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು, ಈ ಬಾರಿಯ ಬಹುನಿರೀಕ್ಷಿತ ರಾಷ್ಟ್ರೀಯ ರಂಗೋತ್ಸವವನ್ನು 'ಭಾರತೀಯತೆ' ಎಂಬ ಶೀರ್ಷಿಕೆಯಡಿ ನಡೆಸಲಾಗುತ್ತಿದೆ ಎಂದರು.
ಭಾರತವೆಂದರೆ ಅದು ಕೇವಲ ನೆಲವೊಂದೇ ಅಲ್ಲ. ನಾವು ಇದನ್ನು 'ಮಾತೆ' ಎಂದು ಪೂಜಿಸುತ್ತೇವೆ. ಇದು ನಮ್ಮ ವ್ಯಕ್ತಿತ್ವದ ಹೆಗ್ಗುರುತು. ಇಲ್ಲಿರುವ ದೊಡ್ಡ ಜನಸಂಖ್ಯೆಯೇ ನಮ್ಮ ಅತಿದೊಡ್ಡ ಸಂಪನ್ಮೂಲ. ವಿವಿಧತೆಯಲ್ಲಿ ಏಕತೆಯೇ ನಮ್ಮ ಶಕ್ತಿ. ಜನರಲ್ಲಿ ದೇಶಕ್ಕೆ, ಅಖಂಡತೆಗೆ ನೆರವಾಗುವಂತಹ ಅಂತಃ ಪ್ರೇರಣೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಒಳಿತಾಗಬೇಕೆನ್ನುವ ಆಶಯವನ್ನು ಇಡೀ ನಾಟಕೋತ್ಸವ ಒಳಗೊಳ್ಳಲಿದೆ ಎಂದರು.

ಈ ಬಾರಿ ರಾಷ್ಟ್ರೀಯ ಬಹುರೂಪಿ ರಂಗೋತ್ಸವದ ಅತಿಥಿಗಳ ವಿವರ, ನಾಟಕಗಳ, ಚಲನಚಿತ್ರೋತ್ಸವ, ಜನಪದೋತ್ಸವ, ವಿಚಾರ ಸಂಕಿರಣ, ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಬಗ್ಗೆ ಸಂಪೂರ್ಣ ವಿವರಗಳನ್ನು ಸದ್ಯದಲ್ಲಿಯೇ ನೀಡುವುದಾಗಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ತಿಳಿಸಿದರು.
ಮಹಾ ಪುರುಷರ ದಿವ್ಯ ಪರಂಪರೆಯನ್ನು ನಮ್ಮ ಜನ ನಿರಾಕರಿಸುವಂತಹ ಸ್ಥಿತಿಯನ್ನು ತಂದ ಮೆಕಾಲೆವಾದಿಗಳ, ಮತಾಂತರಿ ಮಿಷನರಿಗಳ, ಉಗ್ರಗಾಮಿಗಳ ಅಭಿಮಾನಿಗಳನ್ನು, ಇವನ್ನೇ ಜಾತ್ಯತೀತ ಎನ್ನುವ ಡೋಂಗಿಗಳ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನು ಬದಲಿಸಿ, ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವುದು ಇಂದು ಅನಿವಾರ್ಯವಾಗಿದೆ. ಇಂದಿನ ಯುವಪೀಳಿಗೆಗೆ ಮತ್ತೆ ಮತ್ತೆ ನಮ್ಮ ಇತಿಹಾಸ ನೆನಪಾಗಬೇಕು, ರಾಷ್ಟ್ರಪ್ರೇಮದ ಪಾಂಚಜನ್ಯ ಮೊಳಗಬೇಕು. ಈ ಸದಾಶಯವೇ ಭಾರತೀಯತೆ ಶೀರ್ಷಿಕೆಯಾಗಿದೆ ಎಂದು ಅಡ್ಡಂಡ ಸಿ. ಕಾರ್ಯಪ್ಪ ಮಾಹಿತಿ ನೀಡಿದರು.
ಈ ವೇಳೆ ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಸಂಚಾಲಕ ಜಗದೀಶ್ ಮಾನವಾರ್ತೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












Click it and Unblock the Notifications