Karnataka Rain: ಮೈಸೂರು ಜಿಲ್ಲೆಯಲ್ಲಿ ಮೊದಲ ಮಳೆ
ಕಳೆದ ಮೂರು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು ಸುಡುವ ಬಿಸಿಲಿನ ನಡುವೆಯೂ ಜನರ ಮನಸ್ಸಿಗೆ ಸ್ವಲ್ಪ ತಂಪು ನೀಡಿದೆ. ಶುಕ್ರವಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಶುಕ್ರವಾರ ಸಂಜೆ ವೇಳೆಗೆ ನಂಜನಗೂಡು ತಾಲೂಕಿನ ಹಲ್ಲರೆಯಲ್ಲಿ ಮಳೆಯಾಗಿದ್ದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಹಲ್ಲರೆ ಮಾತ್ರವಲ್ಲದೆ ತಾಲೂಕಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ರಾತ್ರಿ ನಂಜನಗೂಡು ತಾಲೂಕಿನ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬುಧವಾರ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿತ್ತು. ಮಡಿಕೇರಿ ತಾಲೂಕಿನ ಕಿಗ್ಗಾಲು, ಸೋಮವಾರಪೇಟೆ ಸೇರಿದಂತೆ ಕಡೆಗಳಲ್ಲಿ ವರ್ಷದ ಮೊದಲ ಮಳೆ ತಂಪೆರೆದಿತ್ತು. ಅದಾದ ಬಳಿಕ ಗುರುವಾರ ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು ರೈತರಲ್ಲಿ ಸಂತಸ ಮೂಡಿಸಿತ್ತು. ಗುರುವಾರ ಸಂಜೆ ಬೆಂಗಳೂರಿನ ಹಲವು ಕಡೆಗಳಲ್ಲಿ ಮಳೆ ಹನಿಗಳ ಸಿಂಚನವಾಗಿತ್ತು.
ಮಾರ್ಚ 20ರ ಬಳಿಕ ಮಳೆ ಸಾಧ್ಯತೆ
ಮಾರ್ಚ್ 20ರ ಬಳಿಕ ರಾಜ್ಯದ ಹಲವು ಕಡೆಗಳಲ್ಲಿ ಮಳೆಯನ್ನು ನಿರೀಕ್ಷೆ ಮಾಡಲಾಗಿದೆ. ಕೊಡಗು, ಪಶ್ಚಿಮ ಘಟ್ಟಗಳ ಹಲವು ಭಾಗಗಳಲ್ಲಿ ಮಳೆಯಾಗುತ್ತದೆ ಎಂದು ಮುನ್ಸೂಚನೆ ನೀಡಿದೆ. ಸುಡುವ ಬಿಸಿಲಿನ ನಡುವೆಯೂ ಇದು ರಾಜ್ಯದ ಜನತೆಗೆ ಸಂತಸದ ಸುದ್ದಿಯಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲರೆಯಲ್ಲಿ ವರ್ಷಧಾರೆ 🌧️☔️#KarnatakaRains #MysuruRains pic.twitter.com/lckSw6144S
— ರವಿ ಕೀರ್ತಿ ಗೌಡ (@ravikeerthi22) March 15, 2024
ಕಳೆದ ವರ್ಷ ಭೀಕರ ಬರಗಾಲದ ಬಳಿಕ, ಬೇಸಿಗೆಯ ಸುಡುವ ಬಿಸಿಲು ಜನರನ್ನು ಹೈರಾಣಾಗಿಸಿದೆ. ಮಳೆ ಯಾವಾಗ ಶುರುವಾಗುತ್ತೆ ಎಂದು ಜನ ಆಕಾಶದತ್ತ ನೋಡುವಂತಾಗಿದೆ. ನಗರದ ಬಹುತೇಕ ಜಲಾಶಯಗಳು ಖಾಲಿಯಾಗಿದ್ದು ಕುಡಿಯಲು ಮಾತ್ರ ನೀರು ಲಭ್ಯವಿದೆ. ಕೆರೆ, ಕಟ್ಟೆಗಳು ಬತ್ತಿದ್ದು ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿದೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಬೆಂಗಳೂರಿನ ಹಲವು ಕೆರೆಗಳು ಕೂಡ ಬತ್ತಿದ್ದು, ತೀವ್ರ ಹಾಹಾಕಾರ ಶುರುವಾಗಿದೆ. ಜೂನ್ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಅದಕ್ಕೂ ಮುನ್ನವೇ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ. ಸದ್ಯದ ಪರಿಸ್ಥಿತಿ ಗಮನಿಸಿದರೆ ಮಳೆ ಅಂದುಕೊಂಡಿದ್ದಕ್ಕಿಂತ ಮುನ್ನವೇ ಶುರುವಾಗುವ ಸೂಚನೆ ಇದೆ. ಹೇಗಾದರೂ ಆಗಲಿ ಮೊದಲು ಮಳೆಯಾಗಲಿ ಎನ್ನುವುದು ಕೂಡ ರಾಜ್ಯದ ಜನರ ಪ್ರಾರ್ಥನೆಯಾಗಿದೆ.












Click it and Unblock the Notifications