Pratap Simha: ಪ್ರತಾಪ್ ಸಿಂಹ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ನಾಯಕರು! ಪಕ್ಷದಿಂದ ಉಚ್ಛಾಟಿಸಲು ಪತ್ರ
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ವಪಕ್ಷದಲ್ಲೇ ಆಕ್ರೋಶ ವ್ತಕ್ತವಾಗುತ್ತಿದೆ. ಮೈಸೂರಿನ ಕೆಲವು ಬಿಜೆಪಿ ಮುಖಂಡರು ಪ್ರತಾಪ್ ಸಿಂಹ ವಿರುದ್ಧ ಸಿಟ್ಟಿಗೆದ್ದಿದ್ದು ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕು ಎಂದು ಪತ್ರ ಬರೆದಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸುವಂತೆ ಪ್ರತಾಪ್ ಸಿಂಹ ಕೇಂದ್ರ ಸಚಿವರನ್ನು ಭೇಟಿಯಾಗಿದ್ದು ಬಿಜೆಪಿ ನಾಯಕರನ್ನು ಕೆರಳಿಸಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಯದುವೀರ್ ಒಡೆಯರ್ ಅವರಿಗೆ ಮುಜುಗರ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಪ್ರತಾಪ್ ಸಿಂಹ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವುದು ಈ ಭಾಗದ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ.

ಕೆಲವು ಮುಖಂಡರು ಪತ್ರ ಬರೆದಿದ್ದು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರಾದ ಕುಮಾರ್ ಗೌಡ, ಮೈ.ಕಾ ಪ್ರೇಮ್, ಕುಮಾರ್ ಪ್ರತಾಪ್ ಸಿಂಹ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪ್ರತಾಪ್ ಸಿಂಹ ಪಕ್ಷಕ್ಕೆ ಮುಜುಗರ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿಲ್ಲ. ವರುಣ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡಿದ್ದರೂ, ಅಲ್ಲಿ ಪಕ್ಷ ಗೆಲುವು ಸಾಧಿಸಲಿಲ್ಲ. ವಕ್ಫ್ ವಿಚಾರದಲ್ಲಿ ಬಿಜೆಪಿ ಹೋರಾಟದಲ್ಲಿ ಭಾಗವಹಿಸದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಮುಜುಗರ ಉಂಟುಮಾಡಿದ್ದು, ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಿನ್ಸಸ್ ರಸ್ತೆ ವಿವಾದ..
ಮೈಸೂರಿನ ಪ್ರಿನ್ಸಸ್ ರಸ್ತೆಯನ್ನು ಸಿದ್ದರಾಮಯ್ಯ ರಸ್ತೆ ಎಂದು ಮರುನಾಮಕರಣ ಮಾಡುವ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಯದುವೀರ್ ಒಡೆಯರ್ ಮರುನಾಮಕರಣ ಮಾಡುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರು ಕೂಡ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದರೆ, ಪ್ರತಾಪ್ ಸಿಂಹ ಮಾತ್ರ ಸಿದ್ದರಾಮಯ್ಯ ಹೆಸರಿಡುವ ನಿರ್ಧಾರ ಸರಿ ಇದೆ ಎಂದಿದ್ದರು. ಇದು ಬಿಜೆಪಿ ನಾಯಕರಲ್ಲಿ ಅಚ್ಚರಿ ಉಂಟು ಮಾಡಿದ್ದಲ್ಲದೆ, ಪಕ್ಷದ ಒಡಕನ್ನು ಎತ್ತಿ ತೋರಿಸಿತ್ತು.
ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದೇ ಇದ್ದರೂ ಬಂದು ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ. ಅವರ ನಡವಳಿಕೆ ಪಕ್ಷದ ನಾಯಕರಿಗೆ ಬೇಸರ ತರಿಸಿದೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರೋಧಿ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವುದು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹಲವು ಸಂದರ್ಭದಲ್ಲಿ ಪ್ರತಾಪ್ ಸಿಂಹ ಬಿಜೆಪಿ ಹಿರಿಯ ನಾಯಕರ ಬಗ್ಗೆಯೇ ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಅಡ್ಜಸ್ಟ್‌ಮೆಂಟ್ ರಾಜಕಾರಣ ನಡೆಯುತ್ತಿದೆ ಎಂದು ಹಿರಿಯ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದು, ಹಲವು ನಾಯಕರ ಸಿಟ್ಟಿಗೆ ಕಾರಣವಾಗಿತ್ತು.












Click it and Unblock the Notifications