ನಂಜನಗೂಡು; ಗೌತಮ ಪಂಚ ಮಹಾರಥೋತ್ಸವಕ್ಕೆ ಕೋವಿಡ್ ಅಡ್ಡಿ
ಮೈಸೂರು, ಮಾರ್ಚ್ 17; ರಾಜ್ಯದಲ್ಲಿ ಕೊರೊನಾ ಸೋಂಕು ಹಬ್ಬುವ ಆತಂಕ ಹೆಚ್ಚುತ್ತಿದ್ದುದೆ. ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಗೌತಮ ಪಂಚ ಮಹಾರಥೋತ್ಸವ ಸಂಭ್ರಮಕ್ಕೂ ಅಡ್ಡಿಯಾಗಿದೆ.
ಕಳೆದ ವರ್ಷ ಕೊರೊನಾ ಸೋಂಕು ಕಾಲಿಟ್ಟ ಆರಂಭಿಕ ದಿನಗಳಲ್ಲಿ ನಡೆಯಬೇಕಿದ್ದ ದೊಡ್ಡ ಜಾತ್ರಾ ಮಹೋತ್ಸವ ರದ್ದಾಗಿತು. ಈಗ ಸೋಂಕು ಉಲ್ಬಣ ಆಗುತ್ತಿರುವುದರಿಂದ ಮೈಸೂರು ಜಿಲ್ಲಾಧಿಕರಿ ರೋಹಿಣಿ ಸಿಂಧೂರಿ ದೊಡ್ಡ ಜಾತ್ರೆಯನ್ನು ರದ್ದುಗೊಳಿಸಿದ್ದು, ಕೇವಲ ಸಾಂಪ್ರದಾಯಿಕ ಹಾಗೂ ಸರಳ ಜಾತ್ರೆ ನಡೆಸುವಂತೆ ಆದೇಶ ನೀಡಿದ್ದಾರೆ.
ಕಳೆದ ವರ್ಷ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಗೌತಮ ಮಂಚಮಹಾರಥೋತ್ಸವ ರದ್ದಾಗಿದ್ದರಿಂದ ಭಕ್ತರು ನಿರಾಸೆಗೊಂಡಿದ್ದರು. ಭಕ್ತ ಸಮೂಹ ಈ ಬಾರಿಯಾದರೂ ರಥ ಎಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಭಕ್ತರ ನಿರೀಕ್ಷೆಗೆ ಕೋವಿಡ್ ಪರಿಸ್ಥಿತಿ ತಣ್ಣೀರು ಸುರಿದಿದೆ.

ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಾ.19 ರಿಂದ 30ರ ತನಕ ನಡೆಯಬೇಕಿದ್ದ ಧಾರ್ಮಿಕ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ. ಕೇವಲ ಸಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರ್ಚಕರು, ಸಿಬ್ಬಂದಿ ಹಾಗೂ ಸ್ಥಳೀಯರ ಮಾತ್ರ ಉಪಸ್ಥಿತರಿರಬಹುದು.
ಮಾರ್ಚ್ 26ರಂದು ನಡೆಯಬೇಕಿದ್ದ ಗೌತಮ ಪಂಚಮಹಾರಥೋತ್ಸವದ ಬದಲಾಗಿ ದೇವಾಲಯದ ಹೊರ ಆವರಣದಲ್ಲಿಅರ್ಚಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸಿ, ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಚಿಕ್ಕ ತೇರಿನಲ್ಲಿ ರಥೋತ್ಸವ ನಡೆಸಲು ಅನುಮತಿ ಸಿಕ್ಕಿದೆ.
ಮಾರ್ಚ್ 19ರಿಂದ 30ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ನಂಜನಗೂಡಿನ ಸ್ಥಳೀಯ ಗ್ರಾಮಸ್ಥರನ್ನು ಹೊರತುಪಡಿಸಿ ಹೊರರಾಜ್ಯ, ಹೊರ ಜಿಲ್ಲೆ, ತಾಲೂಕಿನಿಂದ ಬರುವ ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿದೆ.












Click it and Unblock the Notifications