ವಾರಾಂತ್ಯದಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಗಮನಕ್ಕೆ
ಮೈಸೂರು, ಸೆಪ್ಟೆಂಬರ್ 29: ಮೈಸೂರು ದಸರಾ 2021ರ ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್ 7 ರಿಂದ 15ರ ತನಕ ಈ ಬಾರಿಯ ದಸರಾ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಈ ಬಾರಿಯೂ ಸರಳವಾಗಿ ದಸರಾ ಮಹೋತ್ಸವ ನಡೆಯಲಿದೆ.
ಮೈಸೂರು ಅರಮನೆಯಲ್ಲಿ ದಸರಾ 2021ರ ಪ್ರಯುಕ್ತ ಮೈಸೂರು ರಾಜಮನೆತನದವರು ಅರಮನೆ ಒಳ ಆವರಣದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಪ್ರವಾಸಿಗರಿಗೆ ಅರಮನೆ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಅಕ್ಟೋಬರ್ 1, 7, 14, 15, 31ರಂದು ಅರಮನೆ ವೀಕ್ಷಣೆಗೆ ಪ್ರವಾಸಿಗರು ಭೇಟಿ ನೀಡುವಂತಿಲ್ಲ ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ತಿಳಿಸಿದ್ದಾರೆ. ಅಕ್ಟೋಬರ್ 1 ಶುಕ್ರವಾರ ಸಿಂಹಾಸನ ಜೋಡಣೆ ಪ್ರಯುಕ್ತ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಪ್ರವೇಶವಿರುವುದಿಲ್ಲ.

ಅಕ್ಟೋಬರ್ 7ರ ಗುರುವಾರ ಖಾಸಗಿ ದರ್ಬಾರ್‌ನಲ್ಲಿ ರಾಜವಂಶಸ್ಥರ ಧಾರ್ಮಿಕ ಪೂಜೆಯ ಪ್ರಯುಕ್ತ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ತನಕ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ಅಕ್ಟೋಬರ್14ರ ಗುರುವಾರ ಆಯುಧ ಪೂಜೆ ಪ್ರಯುಕ್ತ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ಪ್ರವೇಶವಿಲ್ಲ.
ಅಕ್ಟೋಬರ್ 15ರ ಶುಕ್ರವಾರ ವಿಜಯದಶಮಿಯ ಪ್ರಯುಕ್ತ ಸಂಪೂರ್ಣ ದಿನ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡುವಂತಿಲ್ಲ. ಅಕ್ಟೋಬರ್ 31ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಸಿಂಹಾಸನ ವಿಸರ್ಜನೆ ಪ್ರಯುಕ್ತ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
2021ನೇ ಸಾಲಿನ ಮೈಸೂರು ದಸರಾ ಅಕ್ಟೋಬರ್ 7ರಿಂದ 15ರ ತನಕ ನಡೆಯಲಿದೆ. ಅಕ್ಟೋಬರ್ 7ರ ಬೆಳಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ದಸರಾ ಉದ್ಘಾಟನೆ ಮಾಡಲಿದ್ದಾರೆ.
ಕೋವಿಡ್ ಪರಿಸ್ಥಿತಿ ಕಾರಣ ಸರಳವಾಗಿ ದಸರಾ ನಡೆಯಲಿದ್ದು, ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಯುವ ದಸರಾ, ದಸರಾ ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಇರುವುದಿಲ್ಲ.
ವಿಶ್ವವಿಖ್ಯಾತ ಜಂಬೂ ಸವಾರಿ ಅಕ್ಟೋಬರ್ 15ರಂದು ನಡೆಯಲಿದೆ. ಅಕ್ಟೋಬರ್ 15ರ ಸಂಜೆ 4.36 ರಿಂದ 4.44ರ ತನಕ ನಂದಿ ಧ್ವಜ ಪೂಜೆ ನಡೆಯಲಿದೆ. ಬಳಿಕ ಸಂಜೆ 5 ರಿಂದ 5.36ರ ತನಕ ಜಂಬೂ ಸವಾರಿ ಅರಮನೆಯ ಆವರಣದಲ್ಲಿ ಮಾತ್ರ ನಡೆಯಲಿದೆ.
ದಸರಾ ಸಿದ್ಧತೆಗಳು ಅರಮನೆಯಲ್ಲಿ ನಡೆಯುತ್ತಿದ್ದು, ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಅರಮನೆ ಆವರಣದಲ್ಲಿವೆ. ಪ್ರತಿದಿನ ತಾಲೀಮು ನಡೆಸುತ್ತಿವೆ.
ಈ ಬಾರಿ ಸಹ ಚಿನ್ನದ ಅಂಬಾರಿಯನ್ನು 56 ವರ್ಷದ ಅಭಿಮನ್ಯು ಆನೆ ಹೊರಲಿದೆ. ದಸರಾದಲ್ಲಿ ವಿಕ್ರಮ, ಅಶ್ವತ್ಥಾಮ, ಲಕ್ಷ್ಮೀ, ಚೈತ್ರಾ, ಕಾವೇರಿ, ಧನಂಜಯ, ಗೋಪಾಲಸ್ವಾಮಿ ಆನೆಗಳು ಪಾಲ್ಗೊಳ್ಳುತ್ತಿವೆ.
ಗಜಪಡೆ ತಾಲೀಮು; ಐತಿಹಾಸಿಕ ಮೈಸೂರು ದಸರಾದ ರೂವಾರಿಗಳಾದ ಗಜಪಡೆಯನ್ನು ಜಂಬೂ ಸವಾರಿಗಾಗಿ ತಯಾರಿ ಮಾಡಲಾಗುತ್ತಿದೆ. ಜಂಬೂಸವಾರಿಗೆ ಗಜಪಡೆಯನ್ನು ತಯಾರಿಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ತಿಂಗಳಾನುಗಟ್ಟಲೆ ತಾಲೀಮು ನಡೆಸಿ ಸರ್ವ ರೀತಿಯಲ್ಲಿಯೂ ಸಜ್ಜುಗೊಳಿಸುವ ಕಾರ್ಯ ಮಾಡಲಾಗುತ್ತದೆ.
ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳ ಲಾಲನೆ, ಪಾಲನೆ ಕೆಲಸವೂ ಮಾವುತರು ಮತ್ತು ಕಾವಾಡಿಗಳಿಂದ ಅಚ್ಚುಕಟ್ಟಾಗಿ ನಡೆಯುತ್ತದೆ. ಗಜಪಡೆಯಲ್ಲಿರುವ ಆನೆಗಳ ಪೈಕಿ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಬಗ್ಗೆ ವಿಶೇಷ ನಿಗಾವಹಿಸಲಾಗುತ್ತದೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳು ಗಜಪಡೆಗಳ ಎದುರು ಫಿರಂಗಿ ಸಿಡಿಸಿ ಬೆಂಕಿ ಮತ್ತು ಸದ್ದಿಗೆ ಹೆದರದಂತೆ ತಾಲೀಮು ನೀಡಲಾಗುತ್ತದೆ. ಅರಮನೆಗೆ ಆಗಮಿಸಿದ ಆನೆಗಳು ಮೊದಲಿಗೆ ಸದ್ದಿಗೆ ಹೆದರಿದರೂ ಆ ನಂತರ ಹೊಂದಿಕೊಳ್ಳುತ್ತವೆ.












Click it and Unblock the Notifications