ಮೈಸೂರು-ಚೆನ್ನೈ ವಿಮಾನಯಾನ: ದಸರಾ ಹೊತ್ತಿಗೆ ಆರಂಭ!
ಮೈಸೂರು, ಜುಲೈ 29 : ತಾವು ಕೂಡ ವಿಮಾನದಲ್ಲಿ ಪಯಣಿಸಬೇಕೆಂಬ ಮೈಸೂರಿಗರ ಹಲವು ದಿನಗಳ ಕನಸು ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಈ ಬಾರಿಯ ದಸರಾಗೆ ಕೇಂದ್ರ ಸರ್ಕಾರದ 'ಉಡಾನ್' ಯೋಜನೆಯಡಿ ಮೂರು ವರ್ಷ ಅವಧಿಗೆ ವಿಮಾನ ಹಾರಾಟ ನಡೆಸಲು ಎರಡು ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಉಡಾನ್ ಯೋಜನೆಯಡಿ ಮೂರು ವರ್ಷಗಳ ಕಾಲ ವಿಮಾನ ಹಾರಾಟ ನಡೆಸಲು ಕೇಂದ್ರ ಸರ್ಕಾರದ ಯೋಜನೆ ಅಡಿ ಈಗಾಗಲೇ ಏರ್ ಒಡಿಶಾ ಹಾಗೂ ಟ್ರು ಜೆಟ್ ಏರ್ ಕಂಪನಿಯ ಜೊತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಇದೇ ದಸರೆಯ ವೇಳೆಗೆ ಜನರಿಗೆ ಲಭ್ಯವಾಗಲಿದೆ. ಪ್ರತಿದಿನ ಚೆನ್ನೈ - ಮೈಸೂರು ಹಾಗೂ ಮೈಸೂರು - ಚೆನ್ನೈಗೆ ವಿಮಾನ ಹಾರಲಿದೆ.

ಮುಂದಿನ ದಿನಗಳಲ್ಲಿ ದೇಶದ ಇತರ ಪ್ರಮುಖ ನಗರದೊಂದಿಗೆ ವಿಮಾನ ಹಾರಾಟ ನಡೆಸುವ ಬಗ್ಗೆ ಮಾತುಕತೆ ನಡೆದಿದ್ದು, ಶೀಘ್ರವೇ ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ನಡೆಸಲು ಚಿಂತಿಸಲಾಗಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈಗ ಹಾರಾಟ ನಡೆಸಲಿರುವ ಟ್ರೂ ಜೆಟ್ ವಿಮಾನ 72 ಆಸನ ಹೊಂದಿದ್ದು, ಏರ್ ಒಡಿಶಾ ವಿಮಾನವೂ 19 ಆಸನಗಳನ್ನು ಹೊಂದಿದೆ. ಈ ಏರ್ ಕಂಪನಿಯ ವಿಮಾನಗಳಲ್ಲಿ ಅರ್ಧ ಗಂಟೆ ಪ್ರಯಾಣಕ್ಕೆ 1700 ರೂಪಾಯಿ, ಅರ್ಧ ಗಂಟೆಯಿಂದ ಒಂದು ಗಂಟೆ ಪ್ರಯಾಣಕ್ಕೆ 2500 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.












Click it and Unblock the Notifications