Karnataka Poll 2023: ಅಭಿವೃದ್ಧಿ ಮಾಡಿಲ್ಲ ನಾವ್ ವೋಟ್ ಹಾಕಲ್ಲ ಎಂದ ಮೈಸೂರಿನ ಏಳುಹುಂಡಿ ಗ್ರಾಮಸ್ಥರು, ಮನವೊಲಿಕೆ ಯತ್ನ
ಮೈಸೂರು, ಮೇ 10: ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲಾಗುವ ಈ ರಾಜ್ಯ ಸಾರ್ವತ್ರಿಕ ಚುನಾವಣೆ ಮತದಾನವು ಇಂದು ರಾಜ್ಯಾದ್ಯಂತ ಬಿರುಸಿನಿಂದ ನಡೆಯುತ್ತಿದೆ. ಮತದಾನ ಸಂಭ್ರಮ ಕಳೆಗಟ್ಟಿದೆ. ಆದರೆ ಸಾಂಸ್ಕೃತಿಕ ನಗರ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಏಳುಹುಂಡಿಯ ಗ್ರಾಮಸ್ಥರು ಮಾತ್ರ ಮತಗಟ್ಟೆಯತ್ತ ಸುಳಿಯುತ್ತಲೇ ಇಲ್ಲ.
ಕಳೆದ ಐದು ವರ್ಷಗಳಲ್ಲಿ ಗ್ರಾಮದಲ್ಲಿ ಅಭಿವೃದ್ಧಿ ಮಾಡಿಲ್ಲ. ಅದಕ್ಕಾಗಿ ನಾವು ಮತದಾನ ಮಾಡುವುದಿಲ್ಲ ಎಂದು ಏಳುಹುಂಡಿಯ ಇಡಿ ಗ್ರಾಮಸ್ಥರೇ ನಿರ್ಧರಿಸಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಿದೆ. ಆದರೆ ಇದುವರೆಗೂ ಸಹ ಏಳುಹುಂಡಿ ಮತಗಟ್ಟೆಯತ್ತ ಒಬ್ಬರೇ ಒಬ್ಬರು ಮತದಾರರು ಸಹ ಸುಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ ಗ್ರಾಮಸ್ಥರನ್ನು ರಾಜ್ಯ ಚುನಾವಣಾಧಿಕಾರಿಗಳು ಮನವೊಲಿಸಿ ಮತದಾನ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿವೃದ್ಧಿ ಮಾಡದ ಪಕ್ಷಗಳಿಗೆ ನಾವು ಏಕೆ ಮತ ಚಲಾಯಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಪ್ರಶ್ನೆ ಇಟ್ಟಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಗ್ರಾಮದಲ್ಲಿ ಒಂದೇ ಒಂದು ರಸ್ತೆ ಸಹ ಮಾಡಿಲ್ಲ. ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದಿಲ್ಲ ಎಂದ ಮೇಲೆ ನಾವೆಲ್ಲರು ಯಾಕೆ ಮತದಾನ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಚುನಾವಣಾಧಿಕಾರಿಗಳ ವಿಫಲ ಯತ್ನ
ಕ್ಷೇತ್ರದಲ್ಲಿ ನಮ್ಮದ ಕೊನೆಯ ಗ್ರಾಮ. ಇಂತಹ ಗ್ರಾಮದಲ್ಲಿ ಯುಜಿಡಿ ಮಾಡಿಸಿಲ್ಲ, ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮಸ್ಥರು ಒಕ್ಕೋರಲಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರಣಗಳಿಂದ ನಾವು ಮತದಾನ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇತ್ತ ಗ್ರಾಮಸ್ಥರ ಮನವೊಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದರೂ ಸಹ ಇದುವರೆಗೆ ಸಫಲವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಮತದಾರರೆ ಬಾರದ್ದರಿಂದ ಏಳುಹುಂಡಿ ಮತಗಟ್ಟೆಯಲ್ಲಿ ಯಾವುದೇ ಚುನಾವಣಾ-ಮತದಾನ ಪ್ರಕ್ರಿಯೆ ನಡೆದಿಲ್ಲ. ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ.

ಕರ್ನಾಟಕ ರಾಜ್ಯದದಲ್ಲಿ ಇಂದು ಒಂದೇ ಹಂತದಲ್ಲಿ ಒಟ್ಟು ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ಗಂಟೆಯಿಂದಲೇ ಮತದಾನ ನಡೆಯುತ್ತಿದೆ. ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದ್ದು, ನಂತರ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟಗೊಳ್ಳಲಿದೆ.
ರಾಜ್ಯಾದ್ಯಂತ ಬಿರುಸಿನ ಮತದಾನ ನಡೆದರೂ ಸಹ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದ ಗ್ರಾಮಸ್ಥರು ಮತ ಹಾಕುವುದಿಲ್ಲ ಎಂದಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಅನೇಕ ಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸಿವೆ. ಆದರೆ ಈ ಏಳುಹುಂಡಿ ಗ್ರಾಮಕ್ಕೆ ರಸ್ತೆ ಮಾಡಿಲ್ಲ. ಇದು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿನಿಧಿಸಿದ್ದ ಕ್ಷೇತ್ರವೂ ಆಗಿದೆ. ಅಲ್ಲದೇ ಕಳೆದ ಐದು ವರ್ಷಗಳಲ್ಲಿ ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರು ಗ್ರಾಮದ ಕುಂದು ಕೊರತೆ ಕೇಳದಿರುವುದು ದುರಂತ ಸಂಗತಿಯಾಗಿದೆ.












Click it and Unblock the Notifications