ದಕ್ಷ ಅಧಿಕಾರಿ ರಶ್ಮಿಗೆ ವರ್ಗಾವಣೆ ಶಿಕ್ಷೆ

ನಿಯಮ ಬಾಹಿರ ಪ್ರವೇಶ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಲ್ಪಸಂಖ್ಯಾತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿರುದ್ಧ ರಶ್ಮಿ ಮಹೇಶ್ ಕ್ರಮಕ್ಕೆ ಮುಂದಾಗಿದ್ದರು. ಅದರ ಬೆನ್ನಲ್ಲೇ ಸರ್ಕಾರ ಅವರನ್ನು ಬಲವಂತದ ರಜೆ ಮೇಲೆ ಕಳುಹಿಸಲು ಮುಂದಾಗಿತ್ತು. ಇದರಿಂದ ಬೇಸರಗೊಂಡ ಅವರು ಸುದೀರ್ಘ ರಜೆ ಮೇಲೆ ತೆರಳಿದ್ದರು.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಒತ್ತಡಕ್ಕೆ ಮಣಿದು ಸರ್ಕಾರ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ರಶ್ಮಿ ವಿ. ಮಹೇಶ್ ಅವರನ್ನು ವರ್ಗಾವಣೆಗೊಳಿಸಿ ಆಡಳಿತಾತ್ಮಕ ತರಬೇತಿ ಕೇಂದ್ರದ ಮಹಾನಿರ್ದೇಶಕ ಸ್ಥಾನಕ್ಕೆ ನೇಮಿಸಲಾಗಿದೆ
ಈ ಮಧ್ಯೆ, ರಜೆ ಮೇಲೆ ತೆರಳಿದ್ದ ರಶ್ಮಿ ವಿ.ಮಹೇಶ್ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುವಂತೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಒತ್ತಡ ಸಹ ಇತ್ತು. ಈ ಕಾರಣಕ್ಕಾಗಿಯೇ ಅವರನ್ನು ಆಡಳಿತಾತ್ಮಕ ತರಬೇತಿ ಕೇಂದ್ರದ ಮಹಾನಿರ್ದೇಶಕ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಹೇಳಲಾಗಿದೆ.
ಸರಕಾರಿ ಕೋಟಾಕ್ಕೆ ಮೆಡಿಕಲ್ ಸೀಟುಗಳನ್ನು ಒದಗಿಸದ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಇಲಾಖೆಯಲ್ಲಿ ವ್ಯಾಪಕ ಸುಧಾರಣೆ ತರಲು ಐಎಎಸ್ ಅಧಿಕಾರಿ ರಶ್ಮಿ ಶ್ರಮ ವಹಿಸಿದ್ದರು. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದ ಸರ್ಕಾರ, ಕಡ್ಡಾಯ ರಜೆಯ ಮೇಲೆ ತೆರಳುವಂತೆ ರಶ್ಮಿ ಅವರಿಗೆ ಸೂಚಿಸಿತ್ತು. ಹೀಗಾಗಿ 4 ತಿಂಗಳ ಅವಧಿಯ ಸುದೀರ್ಘ ರಜೆಯ ಮೇಲೆ ಅವರು ತೆರಳಿದ್ದರು ಎಂದು ಹೇಳಲಾಗಿತ್ತು.
ಆದರೆ, ರಶ್ಮಿ ಅವರು ಕಡ್ಡಾಯ ರಜೆ ಪಡೆದುಕೊಳ್ಳಲು ವೈಯಕ್ತಿಕ ಕಾರಣವಿದೆ. ತಮ್ಮ ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ರಶ್ಮಿ ರಜೆ ತೆಗೆದುಕೊಂಡಿದ್ದಾರೆ. ಇದರಲ್ಲಿ ಸರಕಾರದ ಪಾತ್ರವೇನೂ ಇಲ್ಲವೆಂದು ಆಗ ಸಮಜಾಯಿಷಿ ನೀಡಲಾಗಿತ್ತು.
ಈ ಮಧ್ಯೆ ಹುದ್ದೆ ನಿರೀಕ್ಷೆಯಲ್ಲಿದ್ದ ಮತ್ತೋರ್ವ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅವರನ್ನು ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯ ಆಡಳಿತಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.
ಕೆಎಎಸ್ ಅಧಿಕಾರಿ ಎನ್.ಟಿ.ಅಬ್ರೂ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆಗೊಳಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.












Click it and Unblock the Notifications