ಇನ್ನು ರಾಜಕೀಯ ಭವಿಷ್ಯ ನುಡಿಯುವುದಿಲ್ಲ: ಕೋಡಿಮಠ ಶ್ರೀ
ಮೈಸೂರು, ಮೇ 26: ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ತಾವು ಹೇಳಿದ್ದ ಭವಿಷ್ಯ ನೂರಕ್ಕೆ ನೂರರಷ್ಟು ನಿಜವಾಗಿದೆ ಎಂದಿದ್ದ ಅರಸೀಕೆರೆಯ ಕೋಡಿಮಠ ಶ್ರೀಗಳಾದ ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರು ಇದೀಗ ರಾಗ ಬದಲಿಸಿದ್ದು, ಇನ್ಮುಂದೆ ತಾವು ರಾಜಕೀಯ ಭವಿಷ್ಯ ನುಡಿಯುವುದಿಲ್ಲ ಎಂದಿದ್ದಾರೆ.
ಇಲ್ಲಿನ ವೀರಶೈವ ಸಜ್ಜನ ಸಂಘವು ಮಂಡಿ ಮೊಹಲ್ಲಾದ ಕಂಠಿಮಲ್ಲಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಡಳಿತಾರೂಢ ಸಿದ್ದರಾಮಯ್ಯ ಸರಕಾರದ ಭವಿಷ್ಯವನ್ನು ಹೇಳಲು ಹಿಂದೇಟು ಹಾಕಿದರು. 'ಸಿದ್ದರಾಮಯ್ಯ ಸರಕಾರದ ಭವಿಷ್ಯವನ್ನು ನಾನು ಈಗಲೇ ನುಡಿದುಬಿಟ್ಟರೆ ನಾಳೆ ಜನ ನನ್ನನ್ನು ಓಡಾಡಲು ಬಿಡುವುದಿಲ್ಲ' ಎಂದು ಆತಂಕದೊಂದಿಗೆ ನಿಗೂಢವಾಗಿ ಹೇಳಿದ್ದಾರೆ.

'ನಾನು ಭವಿಷ್ಯ ರೂಪಿಸುವವನೇ ಹೊರತು, ಭವಿಷ್ಯ ಹೇಳುವವನಲ್ಲ. ಸತ್ಯ ಎಂದಿಗೂ ಅಪ್ರಿಯ ಮತ್ತು ಕಹಿಯಿಂದ ಕೂಡಿರುತ್ತದೆ. ಹೀಗಾಗಿ ಸತ್ಯವನ್ನು ನುಡಿದರೆ ನಮಗೇ ತೊಂದರೆಯಾಗುತ್ತದೆ' ಎಂದು ಕೋಡಿಮಠ ಶ್ರೀ ಹೇಳಿದ್ದಾರೆ. (ಚುನಾವಣೆ ಭವಿಷ್ಯ ನಿಜವಾಯ್ತು: ಕೋಡಿಮಠ ಸ್ವಾಮೀಜಿ)
ಇಷ್ಟು ಹೇಳಿದ ಕೋಡಿಮಠ ಶ್ರೀಗಳು ಸಿದ್ದರಾಮಯ್ಯ ಸರಕಾರದ ಭವಿಷ್ಯವನ್ನು ತಾವು ಹೇಳುವುದಿಲ್ಲ ಎಂದು ಪುನರುಚ್ಚರಿಸಿದರು. ಮುಂದುವರಿದು ಮಾತನಾಡಿದ ಕೋಡಿಮಠ ಶ್ರೀಗಳು 'ಈಗಿನ ರಾಜಕಾರಣಿಗಳು ಪಕ್ಷಾಂತರಿಗಳು. ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಲೇ ಇರುತ್ತಾರೆ. ಆದರೆ ಬಸವಣ್ಣ ಎಂದಿಗೂ ಪಕ್ಷಾಂತರಿ ಆಗಲಿಲ್ಲ' ಎಂದೂ ಅಸಮಾಧಾನ ವ್ಯಕ್ತಪಡಿಸಿದರು.











Click it and Unblock the Notifications