Ganesha Chaturthi: ಪರಿಸರ ಸ್ನೇಹಿ ಗಣಪತಿಗೆ ಮೊರೆಹೋದ ಮೈಸೂರು ಜನತೆ
ಪ್ರತಿ ಬಾರಿ ಗಣೇಶ ಹಬ್ಬ ಬಂದಾಗಲೂ ಪರಿಸರದ ಕಾಳಜಿ ಬಗ್ಗೆ ಕೂಡ ಅರಿವು ಮೂಡಿಸಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್, ಅತಿಯಾದ ರಾಸಾಯನಿಕ ಬಣ್ಣ ಬಳಸಿದ ಗಣೇಶನ ಮೂರ್ತಿಗಳ ಬದಲಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಬಳಸುವಂತೆ ಮನವಿ ಮಾಡಲಾಗುತ್ತದೆ. ಮೊದಲೆಲ್ಲಾ ಬಣ್ಣ, ಬಣ್ಣದ ಗಣಪತಿಯನ್ನು ಇಷ್ಟಪಡುತ್ತಿದ್ದ ಜನ ಇದೀಗ ಪರಿಸರ ಸ್ನೇಹಿ, ಯಾವ ಕೃತಕ ಬಣ್ಣವೂ ಇಲ್ಲದ ಮಣ್ಣಿನ ಗಣಪತಿಗೆ ಮನಸೋಲುತ್ತಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ಮಣ್ಣಿನ ಗಣಪತಿಗೆ ಡಿಮ್ಯಾಂಡ್ ಜೋರಾಗಿದ್ದು, ಬಗೆಬಗೆಯ ಮೂರ್ತಿಯನ್ನು ಖರೀದಿಸುತ್ತಿದ್ದಾರೆ. ನಗರದಲ್ಲಿ ವಿವಿಧ ಬಗೆಯ ಗೌರಿ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ. ಅಯೋಧ್ಯೆ ರಾಮ, ಬೆಣ್ಣೆ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಅನೇಕ ಅವತಾರದಲ್ಲಿರುವ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. ನಗರದ ಪ್ರಮುಖ ಬೀದಿಗಳಲ್ಲಿ ಗಣಪತಿ ಮೂರ್ತಿಯನ್ನು ಸಾಲುಸಾಲಾಗಿ ಜೋಡಿಸಿ ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.

ಎಲ್ಲವೂ ದುಬಾರಿ ಜನರ ಜೇಬಿಗೆ ಕತ್ತರಿ
ಇನ್ನು ಹಬ್ಬದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಏಲಕ್ಕಿ ಬಾಳೆ ಕೆಜಿಗೆ 100 ರಿಂದ 120 ರೂಪಾಯಿಗಳವರೆಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ, ಕಿತ್ತಳೆ, ದ್ರಾಕ್ಷಿ, ಸೀತಾಲ ಸೇರಿದಂತೆ ಮೊದಲಾದ ಹಣ್ಣುಗಳ ಬೆಲೆ ಕನಿಷ್ಠ 30 ರಿಂದ 40 ರೂಪಾಯಿವರೆಗೆ ಏರಿಕೆಯಾಗಿದೆ.
ಹಬ್ಬದ ಹಿನ್ನಲೆಯಲ್ಲಿ ಜನ ಬೆಲೆ ಏರಿಕೆ ನಡುವೆಯೂ ಖರೀದಿ ಮಾಡಿದರು. ದೇವರಾಜ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗಳಲ್ಲಿ ಜನ ಸಂದಣಿ ಹೆಚ್ಚಾಗಿತ್ತು. ಗಣಪನ ನೆಚ್ಚಿನ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಬೇಡಿಕೆ ಹೆಚ್ಚಾಗಿತ್ತು. ಬಾಳೆಕಂಬ, ಹೂವಿನ ಹಾರದ ಮಾರಾಟ ಕೂಡ ಜೋರಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಗೂ ಜನ ಮುಗಿಬಿದ್ದರು. ಪ್ರಭಾ, ಒಲಂಪಿಯಾ ಚಿತ್ರಮಂದಿರದ ಬಳಿ, ಸಯ್ಯಾಜಿರಾವ್ ರಸ್ತೆ, ಗಾಂಧಿ ವೃತ್ತ, ಅಗ್ರಹಾರ, ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರು ತುಂಬಿದ್ದರು.
ನಾಡಹಬ್ಬ ದಸರಾಗೆ ಭರ್ಜರಿ ತಯಾರಿ ನಡುವೆಯೂ ಮೈಸೂರು ಜನತೆ ಗೌರಿ ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಖುಷಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಜಂಬೂ ಸವಾರಿ ಆನೆಗಳು ಈಗಾಗಲೇ ಮೈಸೂರಿಗೆ ಬಂದಿದ್ದು ತಾಲೀಮು ನಡೆಸುತ್ತಿವೆ. ಇದು ಮೈಸೂರು ಜನರ ಹಬ್ಬದ ಖುಷಿಯನ್ನು ಡಬಲ್ ಮಾಡಿದೆ.












Click it and Unblock the Notifications