ಮಕ್ಕಳಾಗುವ ವರ ನೀಡ್ತೀನೆಂದು ಮಹಿಳೆಗೆ ವಂಚನೆ: ನೆಲ್ಲಿನಾಥಪುರ ಗ್ರಾಮಸ್ಥರಿಂದ ಗೂಸಾ
ಮೈಸೂರು, ಮೇ 20: "ಮಕ್ಕಳಾಗದ ಮಹಿಳೆಯರಿಗೆ ಮಕ್ಕಳಾಗುವಂತಹ ವರ ಕೊಡುವೆ, ನನ್ನ ಮೇಲೆ ದೇವರು ಬರುತ್ತದೆ" ಎಂದು ಹೇಳಿ ವಂಚಿಸುತ್ತಿದ್ದ ಗುಡ್ಡಪ್ಪನನ್ನು ಜನರು ಹಿಡಿದು ಖಾಕಿ ಪಡೆಗೆ ಒಪ್ಪಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೆಲ್ಲಿನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೆಂಕಟೇಶ ನಾಯಕ (22) ಎಂಬಾತ ಮಹಿಳೆಯರಿಗೆ ವಂಚಿಸಿ ಇದೀಗ ಪೊಲೀಸರು ಅತಿಥಿಯಾದ ನಕಲಿ ಗುಡ್ಡಪ್ಪ. ಈತ ಪಿಯುಸಿ ಫೇಲಾಗಿದ್ದು, ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಹೇಳಿ ಅಮಾಯಕರನ್ನು ವಂಚನೆಗೊಳಪಡಿಸಿದ.
ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಂಡನಹಳ್ಳಿ ಗ್ರಾಮದ ಗೃಹಿಣಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಶನಿ ಮಹಾತ್ಮನ ಪೂಜೆಗೆಂದು ಲಲಿತಾದ್ರಿಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನಕ್ಕೆ ಗೃಹಿಣಿ ಹೋಗುತ್ತಿದ್ದರು. ಇದೇ ನೆಪದಲ್ಲಿ ಗುಡ್ಡಪ್ಪ ಗೃಹಿಣಿ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದಕ್ಕೆ ಶುರು ಮಾಡಿದ್ದಾನೆ.

ಗುಡ್ಡಪ್ಪನ ವರ್ತನೆ ಬಗ್ಗೆ ಗೃಹಿಣಿ ತನ್ನ ಪತಿಗೆ ತಿಳಿಸಿದ್ದಾರೆ. ನಂತರ ಪೂಜೆ ಮಾಡಿಸುವ ನೆಪದಲ್ಲಿ ಗುಡ್ಡಪ್ಪನನ್ನು ಗ್ರಾಮಕ್ಕೆ ಕರೆಸಿ ಗ್ರಾಮಸ್ಥರು ಕೂಡಿಹಾಕಿ ಥಳಿಸಿದ್ದಾರೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಜಯಪುರ ಪೊಲೀಸರು ಬಂದು ಗುಡ್ಡಪ್ಪನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳಾಗುವಂತಹ ವರವನು ನೀಡುವೆ. ತನ್ನ ಜೊತೆ ಒಂದು ದಿನ ಧರ್ಮಸ್ಥಳಕ್ಕೆ ಬನ್ನಿ ಎಂದು ಕರೆದೊಯ್ಯುಲು ಸಹ ಮುಂದಾಗುತ್ತಿದ್ದ ಎಂದು ಆರೋಪಿಸಲಾಗಿದೆ.












Click it and Unblock the Notifications