ಮಾಜಿ ಸಚಿವ ಬೆಂಕಿ ಮಹದೇವ್ ವಿಧಿವಶ
ಮೈಸೂರು, ಆಗಸ್ಟ್ 4 : ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಎಂ.ಮಹಾದೇವ್ ಅವರು ವಿಧಿವಶರಾಗಿದ್ದಾರೆ. ಬೆಂಕಿ ಮಹಾದೇವ್ ಎಂದೇ ಪ್ರಸಿದ್ಧರಾಗಿದ್ದ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮಂಗಳವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಮಹಾದೇವ್ (70) ಅವರು ಮೃತಪಟ್ಟಿದ್ದಾರೆ. ನಂಜನಗೂಡು ಮೂಲದವರಾದ ಮಹಾದೇವ್ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. 2008ರಲ್ಲಿ ಬಿಜೆಪಿ ಸೇರಿದ್ದರು.

ಹಲವು ದಿನಗಳ ಬಳಿಕ ಬಿಜೆಪಿ ತೊರೆದಿದ್ದ ಅವರು ಜೆಡಿಎಸ್ ಸೇರಿದ್ದರು. ನಂತರ ಜೆಡಿಎಸ್ ಬಿಟ್ಟು ಬಿಜೆಪಿಗೆ ವಾಪಸ್ ಆಗಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಸಂಪುಟದಲ್ಲಿ ರೇಷ್ಮೆ ಸಚಿವರಾಗಿದ್ದರು.
ಪಕ್ಷದ ವಿರುದ್ಧ ಅಸಮಾಧಾನ : ಬೆಂಕಿ ಮಹಾದೇವ್ ಅವರು 2013ರ ವಿಧಾನಸಭೆ ಚುನಾವವಣೆ ವೇಳೆಯಲ್ಲಿ ಚಾಮುಂಡೇಶ್ವರಿ ಮತ್ತು ಹನ್ನೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬಯಸಿದ್ದರು. ಆದರೆ, ಜೆಡಿಎಸ್ ರಾಷ್ಟಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಟಿಕೆಟ್ ನೀಡಲು ಕೊನೆಯ ಕ್ಷಣದಲ್ಲಿ ನಿರಾಕರಿಸಿದ್ದರು.
ಅಂದಿನಿಂದಲೇ ಪಕ್ಷದ ನಾಯಕರ ಧೋರಣೆ ವಿರುದ್ಧ ಮಹಾದೇವ್ ಅಸಮಾಧಾನಗೊಂಡಿದ್ದರು. ನಂತರ ನಡೆದ ಬೆಳವಣಿಗೆಗಳಿಂದ ಬಿಜೆಪಿಗೆ ವಾಪಸ್ ಆಗಿದ್ದರು. ಆದರೆ, ಅನಾರೋಗ್ಯದ ಹಿನ್ನಲೆಯಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರವುಳಿದಿದ್ದರು.












Click it and Unblock the Notifications