Pratap Simha: ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ- ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್
ಮೈಸೂರು ಫೆಬ್ರವರಿ 22: ಮೈಸೂರಿನ ಉದಯಗಿರಿ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣ ವಿಚಾರದ ಬಗ್ಗೆ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಅವರ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ದೂರು ದಾಖಲಿಸಿದ್ದಾರೆ. ಮುಸ್ಲಿಂ ಸಮಯದಾಯದವರು ಈ ದೇಶದ ಪ್ರಜೆಗಳೇ ಅಲ್ಲ ಎಂಬ ರೀತಿಯಲ್ಲಿ ಪ್ರತಾಪ್ ಸಿಂಹ ಹೇಳಿದ್ದರು. ಮುಸ್ಲಿಂ ಸಮುದಾಯದ ಜನ ಸಂಖ್ಯೆ ಜಾಸ್ತಿ ಮಾಡಿಕೊಂಡು ಹೆಚ್ಚು ಹೆಚ್ಚು ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂದು ಫೆಬ್ರವರಿ 20ರಂದು ಮಾಧ್ಯಮದವರೊಂದಿಗೆ ಮಾತನಾಡುವಾಗ ದೂರಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಲಾಗಿದೆ.

ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ದೇಶ ಇಬ್ಬಾಗ ಆದಾಗ ಮುಸ್ಲಿಮರು ದೇಶ ಬಿಟ್ಟು ತೊಲಗಬೇಕಿತ್ತು. ಆದರೆ ಅವರು ಇಲ್ಲೇ ಉಳಿದುಕೊಂಡು ಮಕ್ಕಳನ್ನು ಹುಟ್ಟಿಸುವುದನ್ನು ಬಿಟ್ಟು ಬೇರೇನು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪ್ರತಾಪ್ ಸಿಂಹರ ಈ ಹೇಳಿಕೆಗೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಆರೋಪಿಗಳಿಗೆ ಸರ್ಕಾರದಿಂದ ರಕ್ಷಣೆ- ಪ್ರತಾಪ್ ಸಿಂಹ
ಅಲ್ಲದೆ ಉದಯಗಿರಿ ಘಟನೆಯಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಆರೋಪಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಅಪರಾಧಿಗಳ ಬಂಧನದಲ್ಲಿ ವಿಳಂಬವಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ, ಯಾಕೆ ಆರೋಪಿಗಳನ್ನು ಬಂಧಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಕೇವಲ ಮುಸಲ್ಮಾನರನ್ನು ಓಲೈಕೆ ಮಾಡುವುದೇ ಒನ್‌ಲೈನ್ ಅಜೆಂಡಾವಾಗಿದೆ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬೇಕಾಗಿಲ್ಲ. ಅವರಿಗೆ ಮುಸಲ್ಮಾನರ ಮತ ಬೇಕು ಅಷ್ಟೇ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಲ್ಲದೇ ರಾಜ್ಯ ಸರ್ಕಾರವನ್ನು ತಾಲಿಬಾನಿ ಸರ್ಕಾರಕ್ಕೆ ಹೋಲಿಸಿ ಸಿಎಂ ಸಿದ್ದರಾಮಯ್ಯ ಅದರ ಮುಖ್ಯಸ್ಥರಾಗಿದ್ದಾರೆಂದು ಆರೋಪ ಮಾಡಿದರು.

ಮುಸ್ಲಿಂರು ಬರೀ ಕೌರ್ಯ ಮಾಡುತ್ತಿದ್ದಾರೆ. ಅವರಿಗೆ ಶೌರ್ಯ ಎಂಬುದು ತಿಳಿದಿಲ್ಲ, ಹಿಂದೂಗಳ ಮೇಲೆ ಕಲ್ಲು ಹೊಡೆಯಲು ಕಾಂಗ್ರೆಸ್ ಸರ್ಕಾರ ಪುಂಡ ಮುಸ್ಲಿಂರಿಗೆ ಫ್ರೀ ಪರ್ಮಿಟ್ ನೀಡಿದೆ. ಮುಸಲ್ಮಾನರು ಪ್ರೊಟೆಕ್ಷನ್ ಕೇಳಿದರೆ ಸರ್ಕಾರ ನೀಡಲಿ ಯಾರು ಬೇಡವೆನ್ನುತ್ತಾರೆ. ಆದರೆ, ಅವರು ದುಷ್ಕೃತ್ಯಗಳನ್ನು ನಡೆಸಿದಾಗ ಬಂಧಿಸಿ ದಂಡಿಸುವುದನ್ನು ಬಿಟ್ಟು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅವರನ್ನು ತಡೆಯುವುದು ಹೇಗೆ? ಅವರಿಗೆ ಹೆದರಿ ಹಿಂದೂಗಳು ಮನೆ ಬಿಟ್ಟು ಬೇರೆ ಕಡೆ ಹೋಗಬೇಕೇ? ಅವರು ಹೊಗೋದಾದರೂ ಎಲ್ಲಿಗೆ ? ಎಂದು ಪ್ರಶ್ನಿಸಿದರು.
ಮುಸಲ್ಮಾನರಿಗಾದರೆ 57 ಇಸ್ಲಾಮಿಕ್ ರಾಷ್ಟ್ರಗಳಿವೆ, ಹಿಂದೂಗಳಿಗೆ ಯಾವು ದೇಶವಿದೆ? ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಹಾಗೇ ಸರ್ಕಾರ ನಡೆಸಿದರೆ ಮುಸಲ್ಮಾನರು ಹದ್ದು ಬಸ್ತಿನಲ್ಲಿರುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಮುಸಲ್ಮಾನರು ತಪ್ಪು ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಜಿ.ಪರಮೇಶ್ವರ್ ಅವರಿಗೆ ಗೃಹ ಸಚಿವರಾಗಿರಲು ಯಾವುದೇ ನೈತಿಕತೆ ಇಲ್ಲ. ಇನ್ನು ನಮ್ಮ ರಾಜ್ಯದಲ್ಲಿ ಬುಲ್ಡೋಜರ್ ಕಾನೂನು ತರಲು ಯಾರಿಗೆ ಧಮ್ ಇದೆ? ಯೋಗಿ ಆದಿತ್ಯನಾತ್ ಅವರ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಕು ಸಾಧ್ಯನಾ ಎಂದು ವಾಗ್ದಾಳಿ ನಡೆಸಿದ್ದರು.












Click it and Unblock the Notifications