Actress Vidya: ಪತಿಯಿಂದಲೆ ಭಜರಂಗಿ ಸಿನಿಮಾ ನಟಿ, ಕಾಂಗ್ರೆಸ್ ಮುಖಂಡೆಯ ಭೀಕರ ಹತ್ಯೆ
ಮೈಸೂರು, ಮೇ. 21: ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ಮುಖಂಡೆ ಮತ್ತು ಸಿನಿಮಾ ನಟಿ ವಿದ್ಯಾ ಅವರನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ. ಪೊಲೀಸರ ಪ್ರಕಾರ ವಿದ್ಯಾ ಅವರನ್ನು ಮನೆಯಲ್ಲಿ ಕೊಲೆ ಮಾಡಲಾಗಿದೆ.
ಕೊಲೆಯಾದ ವಿದ್ಯಾ ಕಾಂಗ್ರೆಸ್ ಮುಖಂಡೆ. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆಯಾಗಿದೆ ಎನ್ನಲಾಗಿದೆ. ಹತ್ಯೆಯ ಅರೋಪಿಯಾಗಿರುವ ಪತಿ ನಂದೀಶ್ ಹತ್ಯೆಗೈದು ಪರಾರಿಯಾಗಿದ್ದಾರೆ. ವಿದ್ಯಾ ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿದ್ದು, ಬನ್ನೂರಿನ ತುರಗನೂರಿನ ನಂದೀಶ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರು ವಿದ್ಯಾಗೆ ಮತ್ತೊಂದು ಗುರುತರ ಜವಾಬ್ದಾರಿ ನೀಡಲು ಮುಂದಾಗಿದ್ದರೆಂದು ತಿಳಿದುಬಂದಿದೆ. ಅಲ್ಲದೆ ವಿದ್ಯಾ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಭಜರಂಗಿ, ಚಿರಂಜೀವಿ ಸರ್ಜಾ ಅಭಿನಯದ ಅಜಿತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಇನ್ನು, ವಿದ್ಯಾ ಮತ್ತು ನಂದೀಶ್ ನಡುವೆ ಸಾಮರಸ್ಯ ಇರಲಿಲ್ಲವೆಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿಯಲ್ಲಿ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ವಿದ್ಯಾ ತೆರಳಿದ್ದಾರೆ. ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತ್ನಿ ತಲೆಗೆ ನಂದೀಶ್ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯಗೈದ ಪತಿ ನಂದೀಶ್ ಸೆರೆಗೆ ಬನ್ನೂರು ಪೊಲೀಸರು ಬಲೆ ಬೀಸಿದ್ದಾರೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ ಸಾವಿನ ಸುತ್ತಲಿನ ಸನ್ನಿವೇಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications