ತಿ.ನರಸೀಪುರ: ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಹಿಂದೆ ಸಚಿವರ ಪುತ್ರನ ಕೈವಾಡ: ಚಕ್ರವರ್ತಿ ಸೂಲಿಬೆಲೆ ನೇರ ಆರೋಪ
ಬೆಂಗಳೂರು, ಜುಲೈ, 11: ತಿ.ನರಸೀಪುರ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ನಿಮಿಷಕ್ಕೊಂದು ತಿರುವು ಪಡೆಯುತ್ತಲೇ ಇದೆ. ಹಾಗೆಯೇ ಇದೀಗ ವೇಣುಗೋಪಾಲ್ ಹತ್ಯೆಯ ಹಿಂದೆ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರ ಕೈವಾಡವಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇರವಾಗಿ ಆರೋಪಿಸಿದ್ದಾರೆ ಎಂದು ವಿಸ್ತಾರ ಕನ್ನಡ ನ್ಯೂಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹತ್ಯೆಯ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡ ಇದೆ ಎಂದು ಮಾದ್ಯಮದ ಜೊತೆ ಚಕ್ರವರ್ತಿ ಸುಲಿಬೆಲೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಅಂತಾ ವಿಸ್ತಾರ ಕನ್ನಡ ನ್ಯೂಸ್ ವರದಿ ಮಾಡಿದೆ.

ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ತನ್ನ ಸಹಚರರಿಂದ ಈ ಕೃತ್ಯವನ್ನು ಮಾಡಿಸಿದ್ದಾರೆ ಅಂತಾ ವೇಣುಗೋಪಾಲ್ ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ ಅಂತಾ ಚಕ್ರವರ್ತಿ ಸುಲಿಬೆಲೆ ಅವರು ಹೇಳಿದ್ದಾರೆ. ವೇಣುಗೋಪಾಲ್ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ತಿ.ನರಸಿಪುರದ ಸ್ನೇಹಿತರು, ಈ ಕೃತ್ಯವನ್ನು ಸುನಿಲ್ ಬೋಸ್ ಕಡೆಯವರೇ ಮಾಡಿದ್ದಾರೆ ಎಂದು ಹೇಳಿದ್ದರು.
ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಹೇಳಲಿಲ್ಲ. ಆದರೆ ಈಗ ಸುನಿಲ್ ಬೋಸ್ ಜೊತೆಗೆ ಆರೋಪಿಗಳ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ ಎಂದು ಚಕ್ರವರ್ತಿ ಸುಲಿಬೆಲೆ ಹೇಳಿದ್ದಾರೆ ಎಂದು ವಿಸ್ತಾರ ಕನ್ನಡ ನ್ಯೂಸ್‌ನಲ್ಲಿ ವರದಿಯಾಗಿದೆ.
ನಾಲ್ವರು ಆರೋಪಿಗಳ ಬಂಧನ
ಇನ್ನು ತಿ.ನರಸೀಪುರ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿತ್ತು.
ಈ ಮೊದಲು ಮಣಿಕಂಠ ಹಾಗೂ ಸಂದೇಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ನಾಲ್ವರು ಆರೋಪಗಳ ಬಂಧನವಾಗಿದ್ದು, ಬಂಧಿತರ ಸಂಖ್ಯೆ 6ಕ್ಕೆ ಏರಿದೆ. ವೇಣುಗೋಪಾಲ್ ನಾಯಕನ ಕೊಲೆ ಪ್ರಕರಣದಲ್ಲಿ ಮೈಸೂರಿನ ಬಿಜೆಪಿ ಕಾರ್ಪೋರೇಟರ್ ಸಹೋದರ ಶಂಕರ್ ಅಲಿಯಾಸ್ ತುಪ್ಪ ಹಾಗೂ ಹ್ಯಾರೀಶ್, ಅನಿಲ್, ಮಂಜು ಎಂಬ ನಾಲ್ಕು ಆರೋಪಿಗಳ ಬಂಧನವಾಗಿದೆ.
ಇನ್ನು ತಿ.ನರಸೀಪುರದಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್ ಅವರನ್ನು ಒಳಗೊಂಡ ತಂಡ ಭೇಟಿ ನೀಡಿದೆ.
ಮತ್ತೊಂದೆಡೆ ಬೆಳಗಾವಿಯ ಜೈನಮುನಿ ಕಾಮಕುಮಾರ್ ನಂದಿಮಹಾರಾಜ ಹತ್ಯೆ ಪರಿಶೀಲನೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಮಹೇಶ್, ಶಾಸಕ ಅಭಯ್ ಪಾಟೀಲ್, ಈರಣ್ಣ ಕಪಾಡಿ, ಸಂಸದೆ ಮಂಗಳಾ ಸುರೇಶ್ ಅಂಗಡಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಬೆಳಗಾವಿ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ್ ನೇರ್ಲಿ, ಬೆಳಗಾವಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಸಂಜಯ್ ಪಾಟೀಲ್, ರಾಜ್ಯ ವಕ್ತಾರ ಎಂ.ಬಿ.ಜಿರಲಿ ಅವರನ್ನು ಒಳಗೊಂಡ ತಂಡ ತೆರಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications