ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ನಾಣ್ಯದ ಗಿಫ್ಟ್ ನೀಡಿದ ಶೃತಿ ನಾಯ್ಡು
ಮೈಸೂರು,
ಮೇ 11: ಜೀವದ ಹಂಗು ತೊರೆದು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನಟಿ ಹಾಗೂ ನಿರ್ಮಾಪಕಿ ಶೃತಿ ನಾಯ್ಡು ಅವರು ವಿಭಿನ್ನ ವಿನ್ಯಾಸದಲ್ಲಿ ಸಿದ್ಧಪಡಿಸಿರುವ ಬಾಕ್ಸ್ ವೊಂದರಲ್ಲಿ 20 ಗ್ರಾಂ ಬೆಳ್ಳಿ ನಾಣ್ಯವನ್ನಿಟ್ಟು ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಮಾರಕ
ಕೋವಿಡ್-19 ಸೋಂಕಿನ ವಿರುದ್ದ ಹೋರಾಡಲು ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಅದರಲ್ಲೂ ಮುಂಚೂಣಿ ಸೇವೆಯಲ್ಲಿರುವ ಪೌರ ಕಾರ್ಮಿಕರು, ಪೋಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಗಳ ಶ್ರಮ ಅಪಾರವಾಗಿದ್ದು, ಇವರ ಕರ್ತವ್ಯವೂ ಸವಾಲಿನದ್ದಾಗಿದೆ. ತಮ್ಮ ಕರ್ತವ್ಯದ ನಡುವೆ ಇವರು ಕೋವಿಡ್ ಸೋಂಕಿತರ ಜತೆ ಮುಖಾಮುಖಿ ಆಗಲೇಬೇಕಿದೆ. ಈ ಸಂದರ್ಭದಲ್ಲಿ ಇವರಿಗೇ ಸೋಂಕು ತಗುಲುವ ಅಪಾಯವಿದ್ದರೂ ಪೊಲೀಸರು ಹಾಗೂ ವೈದ್ಯರು ಕರ್ತವ್ಯದಿಂದ ವಿಮುಖರಾಗಿಲ್ಲ. id='are-slot-2' class='oiad oi-axt oiadv'>
ಬಡ ಕುಂಟುಂಬಗಳಿಗೆ ಶೃತಿ ನಾಯ್ಡು ನೆರವು
ಇವರ ಸೇವೆ ಗುರುತಿಸಿ ನಾಗರೀಕರು ದೇಶದ ಹಲವೆಡೆ ಹೂಮಳೆ ಸುರಿದು ಕೃತಜ್ಞತೆ ಸಲ್ಲಿಸಿದ್ದರು. ಈಗಾಗಲೇ ಕೊರೊನಾ ವಾರಿಯರ್ಸ್ ಮತ್ತು ಲಾಕ್ಡೌನ್ ಹಿನ್ನೆಲೆ ಹಸಿವಿನಿಂದ ಬಳಲುತ್ತಿದ್ದ ಅನೇಕ ಕುಟುಂಬಗಳಿಗೆ ಶೃತಿ ನೆರವಾಗಿದ್ದಾರೆ. ಮೈಸೂರು ಸಮೀಪದ ಕಾಡಂಚಿನ ಜನರಿಗೂ ಆಹಾರದ ಕಿಟ್ ತಲುಪಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪೊಲೀಸರ ಸೇವೆಗೆ ಕೃತಜ್ಞತೆ
ಅಲ್ಲದೇ ತಮ್ಮ ಒಡೆತನದ ಮೈಸೂರು ಮಿರ್ಚಿ ರೆಸ್ಟೋರೆಂಟ್ ಮೂಲಕವೂ ಜನರಿಗೆ ನೆರವಾಗಿದ್ದಾರೆ. ಕುವೆಂಪು ನಗರದಲ್ಲಿ ವಾಸವಾಗಿರುವ ಶೃತಿ ನಾಯ್ಡು, ನಿನ್ನೆ ಕುವೆಂಪು ನಗರ ಠಾಣೆಗೆ ತೆರಳಿ 90 ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡಿ ಕೃತಜ್ಞತೆ ಸಲ್ಲಿಸಿದರು. ಪ್ರತಿ ದಿನವೂ ಪೊಲೀಸ್ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಯ ಕೆಲಸ ಕಾರ್ಯ ನೋಡುತ್ತಿದ್ದೇವೆ. ಹಗಲಿರುಳು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಪೊಲೀಸರು ಅಪಾಯಕಾರಿ ಸ್ಥಳದಲ್ಲೂ ಕರ್ತವ್ಯ
ಕೆಂಪು ವಲಯದಲ್ಲಿದ್ದ ಮೈಸೂರನ್ನು ಹಸಿರು ವಲಯವನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮತ್ತು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರನ್ನು ಈ ಸಂದರ್ಭದಲ್ಲಿ ಶೃತಿ ನಾಯ್ಡು ಸ್ಮರಿಸಿದರು.
""ನಾವು ಇಂದು ಮನೆಯಲ್ಲಿ ಆರಾಮಾಗಿ ಇರಬೇಕಾದರೆ ಪೊಲೀಸ್ ಸಿಬ್ಬಂದಿಯ ನಿರಂತರ ಶ್ರಮ ಅಪಾರ. ಅಪಾಯಕಾರಿ ಸ್ಥಳಗಳಲ್ಲೂ ರಜೆ ಪಡೆಯದೆ ಕರ್ತವ್ಯ ಮಾಡಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ನಾನೂ ಮೈಸೂರಿನಲ್ಲಿ ಇರಬೇಕಾಯಿತು'' ಎಂದರು.

ಶಾಂತ ರೀತಿಯಲ್ಲಿ ವರ್ತನೆ
ಎಷ್ಟೇ ಒತ್ತಡವಿದ್ದರೂ ಶಾಂತ ರೀತಿಯಲ್ಲಿ ವರ್ತಿಸಿ ಜನ ಸೇವೆಯಲ್ಲಿ ತೊಡಗಿ, ಜನರ ಸಹಾಯಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.
ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಬೇಕೆನ್ನಿಸಿತು. ಹಾಗಾಗಿ ಈ ಮೂಲಕ ಸಲ್ಲಿಸಿದ್ದೇನೆ ಎಂದು ಶೃತಿ ಹೇಳಿದರು. ಕಾರ್ಯಕ್ರಮದಲ್ಲಿ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಇನ್ಸ್ ಪೆಕ್ಟರ್ ರಾಜು ಜಿ.ಸಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.












Click it and Unblock the Notifications