ಬಸವನನ್ನು ಕಿತ್ತುಕೊಂಡು ಕುಟುಂಬವೊಂದನ್ನು ಬಹಿಷ್ಕಾರ ಹಾಕಿದ ತಗಡೂರು ಗ್ರಾಮಸ್ಥರು!
ಮೈಸೂರು, ಡಿಸೆಂಬರ್ 13: 21ನೇ ಶತಮಾನದಲ್ಲೂ ಬಹಿಷ್ಕಾರದಂಥಹ ಪಿಡುಗು ನಂಜನಗೂಡಿನಲ್ಲಿ ಕಂಡುಬಂದಿದೆ. ಹೌದು, ತಾಲೂಕಿನ ತಗಡೂರಿನಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆಯೊಂದು ನಡೆದಿದೆ.
ಕೂಲಿ ಮಾಡಿ ಬಸವನ ಮುಖಾಂತರ ಭಿಕ್ಷೆ ಎತ್ತಿ ದಿನದೂಡುವ ತಮ್ಮ ಕುಟುಂಬಕ್ಕೆ ತಗಡೂರಿನಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ಆ ಕುಟುಂಬದ ಮುಖ್ಯಸ್ಥ ಮಹದೇವೇಗೌಡ ಅವರು ತಾಲೂಕು ಆಡಳಿತಕ್ಕೆ ದೂರು ನೀಡಿದ್ದಾರೆ.
ಈ ಬಹಿಷ್ಕಾರದಿಂದಾಗಿ ತಮ್ಮ ಕುಟುಂಬಕ್ಕೆ ಈಗ ಗ್ರಾಮದ ಸಾರ್ವಜನಿಕ ನಲ್ಲಿಯಲ್ಲಿ ನೀರಿಲ್ಲ. ಗ್ರಾಮದ ಅಂಗಡಿಗಳಲ್ಲಿ ಸಾಮಗ್ರಿಗಳು ದೊರೆಯುತ್ತಿಲ್ಲ. ಯಾರ ಮನೆಗೂ ಹೋಗುವಂತಿಲ್ಲ. ಗ್ರಾಮದ ಯಾರೂ ಅವರ ಮನೆಗೆ ಬರುವಂತಿಲ್ಲ ಎಂದು ಕೂಟದ ತೀರ್ಮಾನ ಪ್ರಕಟವಾಗಿದೆ.

ಈ ಕೂಟದ ಕಟ್ಟಪ್ಪಣೆಯಿಂದಾಗಿ ತಮ್ಮ ಕುಟುಂಬವೀಗ ಪರದಾಡುವಂತಾಗಿದೆ. ಗಾಮದ ಯಾರಾದರೂ ಇವರ ಮನೆಗೆ ಹೋಗುವುದಿರಲಿ, ಇವರನ್ನು ಮಾತನಾಡಿಸಿದರೂ ಅವರಿಗೆ ತಲಾ 100 ರೂ. ದಂಡ ಹಾಕಲಾಗುತ್ತದೆ ಎಂದು ಮಹದೇವೇಗೌಡ ತಿಳಿಸಿದ್ದಾರೆ.
ಗ್ರಾಮದ ಸಪ್ತ ದೇವಾಲಯದ ಅರ್ಚಕರು ಹಾಗೂ ಜಾತಿ ಸಮಾಜದ ಮುಖಂಡರು ಎಂದು ಕರೆಸಿಕೊಳ್ಳುವ ಮಹನೀಯರೇ ಈ ಅಮಾನವೀಯ ಕಟ್ಟುಪಾಡನ್ನು ಈ ಕುಟುಂಬದ ಮೇಲೆ ಹೇರಿದ್ದಾರೆ ಎಂದು ಹೇಳಲಾಗಿದೆ. ಈ ಬಡ ಕುಟುಂಬ ಮಾಡಿದೆ ಎನ್ನಲಾದ ಕೃತ್ಯದ ಬಗ್ಗೆ ವಿಚಾರಣೆ ನಡೆಸಿದ ಈ ಕೂಟದ ಮುಖಂಡರು, 10 ಸಾವಿರ ರೂ. ದಂಡ ವಸೂಲಿ ಮಾಡಿಯೂ ಬಹಿಷ್ಕಾರ ಸಡಿಲಿಸಿಲ್ಲ ಎಂದು ಮಹದೇವೇಗೌಡ ನಂಜನಗೂಡು ತಾಲ್ಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಮಹದೇವೇಗೌಡರ ಕುಟುಂಬ ನಂಜನಗೂಡಿಗೆ ಬಂದು ತಹಸಿಲ್ದಾರರ ಅನುಪಸ್ಥಿತಿಯಲ್ಲಿ ಉಪತಹಸಿಲ್ದಾರ್ ಬಾಲಸುಬ್ರಮಣ್ಯಂ ಅವರಿಗೆ ಈ ಕುರಿತು ದೂರು ಸಲ್ಲಿಸಿದೆ.
ಬದುಕಿನ ಬಂಡಿ ಸಾಗಿಸುತ್ತಿದ್ದ ಈ ಕುಟುಂಬದ ಬಸವನನ್ನು ಈ ಮುಖಂಡರು ಕಿತ್ತುಕೊಂಡಿದ್ದು, ಅದನ್ನು ವಾಪಸ್ ಕೊಡಿಸಿ ಬಹಿಷ್ಕಾರಕ್ಕೆ ಕೊನೆ ಹಾಕಿಸುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.












Click it and Unblock the Notifications