ಧರ್ಮಸ್ಥಳದಲ್ಲಿ ನೀರಿನ ಬವಣೆ: ಸರ್ಕಾರದೊಂದಿಗೆ ವೀರೇಂದ್ರ ಹೆಗ್ಗಡೆ ಚರ್ಚೆ
ಬೆಂಗಳೂರು, ಮೇ 20: ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬವಣೆಗೆ ಪರಿಹಾರ ಒದಗಿಸುವ ಸಂಬಂಧ ಸರ್ಕಾರ ಮುಂದಾಗಿದೆ.
ಧರ್ಮಸ್ಥಳದಲ್ಲಿ ಉದ್ಭವಿಸಿರುವ ನೀರಿನ ಕೊರತೆಯ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಖ್ಯಮಂತ್ರಿ ಅವರ ಸಲಹೆಯಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸೋಮವಾರ ಚರ್ಚಿಸಿದರು.
ಧರ್ಮಸ್ಥಳದಲ್ಲಿ ನೀರಿನ ಹರಿವನ್ನು ಹಿಡಿದಿಡಲು ಇನ್ನೊಂದು ಚೆಕ್‍ಡ್ಯಾಂ ನಿರ್ಮಾಣದ ಅಗತ್ಯವಿದೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾಡಳಿತ ರೇಷನಿಂಗ್ ಮುಖಾಂತರ ನೀರು ಪೂರೈಸುತ್ತಿದ್ದು, ಕ್ಷೇತ್ರಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತಿದ್ದು, ಈ ಕಾರಣಕ್ಕಾಗಿ ಭಕ್ತಾಧಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡುವಂತೆ ಮನವಿ ಮಾಡಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ತೀವ್ರ ಅಭಾವ ತಲೆದೋರಿರುವ ಕುರಿತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರವಾಗಿ ಪರಿಗಣಿಸಿದ್ದು, ಅವರ ಸಲಹೆಯಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ಚರ್ಚಿಸಿದರು.1/2
— CM of Karnataka (@CMofKarnataka) 20 May 2019
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದು, ಶ್ರೀ ಕ್ಷೇತ್ರದಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀವ್ರ ತರದಲ್ಲಿ ಕಡಿಮೆಯಾಗಿದೆ.ನೀರಿನ ಅಭಾವ ಇರುವುದರಿಂದ ಭಕ್ತಾದಿಗಳು ಹಾಗು ಪ್ರವಾಸಿಗರು ಕೆಲ ದಿನಗಳ ಕಾಲ ಕ್ಷೇತ್ರದ ಭೇಟಿಯನ್ನು ಮುಂದೂಡುವಂತೆ ಕೋರಿದ್ದರು.












Click it and Unblock the Notifications