Vande Bharat Express: ಮಂಗಳೂರು-ಮುಂಬೈ ಪ್ರಯಾಣ ಇನ್ನು 12 ಗಂಟೆ
ಮಂಗಳೂರು, ಮಾರ್ಚ್ 24: ಮಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ಸಂಚಾರದ ಅವಧಿ ಕಡಿಮೆ ಮಾಡಬೇಕು ಅದಕ್ಕಾಗಿ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಮಂಗಳೂರು-ಮುಂಬೈ ವಯಾ ಗೋವಾ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಸದ್ಯ ಕರ್ನಾಟಕದ ಕರಾವಳಿ ನಗರ ಮಂಗಳೂರಿನಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಮುಂಬೈ ನಗರವನ್ನು ಸಂಪರ್ಕಿಸುತ್ತಿದೆ. ಆದರೆ ಪ್ರಯಾಣದ ಅವಧಿ ಅಧಿಕವಾಗಿದೆ.
ಮಂಗಳೂರು-ಮಡಗಾಂವ್ ನಡುವೆ ಈಗಾಗಲೇ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿದೆ. ಈ ರೈಲನ್ನು ಮುಂಬೈ ತನಕ ವಿಸ್ತರಣೆ ಮಾಡಲಾಗುತ್ತದೆಯೇ? ಅಥವ ಮಂಗಳೂರು-ಮುಂಬೈ ಹೊಸ ರೈಲು ಸೇವೆ ಆರಂಭವಾಗುತ್ತದೆಯೇ? ಎಂಬ ಬಗ್ಗೆ ಇನ್ನೂ ರೈಲ್ವೆ ಇಲಾಖೆ ಮಾಹಿತಿ ನೀಡಿಲ್ಲ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ್ದರು. ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲನ್ನು ಪ್ರಯಾಣಿಕರ ಕೊರತೆ ಕಾರಣ ನಿಲ್ಲಿಸಬಾರದು. ಆ ರೈಲನ್ನು ಮುಂಬೈ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದರು. ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಪ್ರಯಾಣದ ಅವಧಿ 12 ಗಂಟೆಗಳು ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳಿಗೆ ಸೂಚನೆ: ಅಶ್ವಿನಿ ವೈಷ್ಣವ್ ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಕುರಿತು ಪ್ರಸ್ತಾವನೆ ತಯಾರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸದ್ಯ ಮಂಗಳೂರು ನಗರದಿಂದ ಕೇರಳಕ್ಕೆ ಒಂದು, ಗೋವಾದ ಮಡಗಾಂವ್‌ಗೆ ಒಂದು ಸೇರಿ ಎರಡು ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ.
ಮಂಗಳೂರು-ಗೋವಾ, ಮುಂಬೈ-ಗೋವಾ ನಡುವೆ ಸದ್ಯ ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿವೆ. ಆದರೆ ಶೇ 70ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ ಎಂಬ ಮಾಹಿತಿ ಇದೆ. ಆದ್ದರಿಂದ ಈ ರೈಲು ಸೇವೆಯನ್ನು ವಿಸ್ತರಣೆ ಮಾಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ಮಂಗಳೂರು-ಗೋವಾ ರೈಲನ್ನು ಮುಂಬೈ ತನಕ, ಮುಂಬೈ-ಗೋವಾ ರೈಲನ್ನು ಮಂಗಳೂರಿಗೆ ವಿಸ್ತರಿಸುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಮತ್ತು ಗೋವಾ (ಮಡಗಾಂವ್) ನಡುವೆ 2023ರ ಡಿಸೆಂಬರ್‌ನಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ ಈ ರೈಲಿನ ಪ್ರಯಾಣಿಕರ ಸಂಖ್ಯೆ ಶೇ 40 ಆಗಿದೆ. ಈ ರೈಲನ್ನು ಕೇರಳದ ಕೋಯಿಕ್ಕೋಡ್‌ಗೆ ವಿಸ್ತರಣೆ ಮಾಡಬೇಕು ಎಂದು ಕೇರಳ ರಾಜ್ಯ ಬೇಡಿಕೆ ಇಟ್ಟಿದೆ.
ಕರ್ನಾಟಕದ ವಿವಿಧ ಜನಪ್ರತಿನಿಧಿಗಳು ರೈಲನ್ನು ಕೇರಳಕ್ಕೆ ವಿಸ್ತರಣೆ ಮಾಡುವ ಬದಲು ಅದನ್ನು ಮುಂಬೈಗೆ ವಿಸ್ತರಣೆ ಮಾಡಿ. ಆಗ ಮಂಗಳೂರು-ಮುಂಬೈ ನಡುವಿನ ಸಂಪರ್ಕ ಸುಲಭವಾಗುತ್ತದೆ. ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಆದ್ದರಿಂದ ಮಂಗಳೂರು-ಮುಂಬೈ ವಂದೇ ಭಾರತ್ ರೈಲಿನ ಕುರಿತು ಈಗ ನಿರೀಕ್ಷೆಗಳು ಹುಟ್ಟಿಕೊಂಡಿವೆ.
ಮುಂಬೈ-ಗೋವಾ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದಾಗ ಪ್ರಯಾಣಿಕರ ಸಂಖ್ಯೆ ಶೇ 90ರಷ್ಟಿತ್ತು. ಪ್ರವಾಸಿಗರಿಗೆ, ಉದ್ಯಮಿಗಳಿಗೆ ಈ ರೈಲು ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಬಳಿಕ ಪ್ರಯಾಣಿಕರ ಸಂಖ್ಯೆ ಶೇ 70ಕ್ಕೆ ಇಳಿಕೆಯಾಗಿದೆ. ಆದ್ದರಿಂದ ಈ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡುವ ಚಿಂತನೆ ಇಲಾಖೆ ಮುಂದೆ ಬಂದಿದೆ.
ಸದ್ಯ ಮುಂಬೈ-ಗೋವಾ ನಡುವಿನ ವಂದೇ ಭಾರತ್ ರೈಲು ಮುಂಬೈನಿಂದ ಬೆಳಗ್ಗೆ 5.25ಕ್ಕೆ ಹೊರಡುತ್ತದೆ, ಗೋವಾಕ್ಕೆ ಮಧ್ಯಾಹ್ನ 1.10ಕ್ಕೆ ಬರುತ್ತದೆ. ಸದ್ಯದ ಪ್ರಸ್ತಾವನೆಯುಂತೆ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡಿದರೆ ಅದು ಸಂಜೆ 6 ಗಂಟೆಗೆ ಮಂಗಳೂರು ನಗರ ತಲುಪಲಿದೆ.
ಮಂಗಳೂರು-ಮಡಗಾಂವ್ ರೈಲು ಮಂಗಳೂರು ನಗರದಿಂದ ಬೆಳಗ್ಗೆ 8.30ಕ್ಕೆ ಹೊರಡುತ್ತಿದ್ದು, 1.10ಕ್ಕೆ ಗೋವಾ ತಲುಪುತ್ತಿದೆ. ಇದನ್ನು ಮುಂಬೈ ತನಕ ವಿಸ್ತರಣೆ ಮಾಡಿದರೆ ರಾತ್ರಿ 9ಕ್ಕೆ ಮುಂಬೈ ತಲುಪುವ ನಿರೀಕ್ಷೆ ಇದೆ. ಈ ಮಾರ್ಗದ ನಿಲ್ದಾಣಗಳನ್ನು ಇನ್ನೂ ಸಹ ಅಂತಿಮಗೊಳಿಸಿಲ್ಲ.
ಪ್ರಸ್ತುತ ಮಂಗಳೂರು-ಮಡಗಾಂವ್ ರೈಲು ಮಡಗಾಂವ್, ಉಡುಪಿ, ಕಾರವಾರ, ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ. ಮುರುಡೇಶ್ವರದ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೈಲು ನಿಲುಗಡೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ರೈಲು ಮುಂಬೈ ತನಕ ವಿಸ್ತರಣೆಯಾದರೆ ಹೊಸ ನಿಲುಗಡೆ ಸಿಗುವ ಸಾಧ್ಯತೆ ಇದೆ.
ಮುಂಬೈ ಕೇಂದ್ರ ರೈಲ್ವೆ ವಲಯಕ್ಕೆ ಒಳಪಡುತ್ತದೆ. ಮುಂಬೈ ರೈಲು ನಿಲ್ದಾಣದ ಪ್ಲಾಟ್ ಫಾರಂ ಈಗಾಗಲೇ ಸಂಚಾರ ದಟ್ಟಣೆಯಿಂದ ಕೂಡಿದೆ. ಅದರಲ್ಲೂ ರಾತ್ರಿ 9 ಗಂಟೆಯ ವೇಳಗೆ ಪ್ಲಾಟ್ ಫಾರಂ ಖಾಲಿ ಇಲ್ಲ. ಆದ್ದರಿಂದ ಮಂಗಳೂರು-ಮುಂಬೈ ವಂದೇ ಭಾರತ್ ರೈಲು ಸೇವೆ ವಿಸ್ತರಣೆ ಮಾಡಿದರೆ ಪ್ಲಾಟ್ ಫಾರಂ ಲಭ್ಯತೆಯ ಕುರಿತು ಸಹ ಇಲಾಖೆ ಚಿಂತನೆ ನಡೆಸಿ, ವೇಳಾಪಟ್ಟಿಯನ್ನು ಅಂತಿಮಗೊಳಿಸಬೇಕಿದೆ.
ರೈಲ್ವೆ ಇಲಾಖೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ಸಂಚಾರಕ್ಕೆ ತಯಾರಿಯನ್ನು ನಡೆಸಿದೆ. ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಈ ಮಾದರಿ ರೈಲುಗಳು ಸಂಚಾರ ನಡೆಸಲಿವೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರಕ್ಕೆ 5 ಮಾರ್ಗ ಗುರುತಿಸಲಾಗಿದ್ದು, ಇದರಲ್ಲಿ ಮಂಗಳೂರು-ಮುಂಬೈ ಸೇರಿತ್ತು.
ಈಗ ರೈಲ್ವೆ ಇಲಾಖೆ ವಂದೇ ಭಾರತ್ ರೈಲನ್ನು ಮಂಗಳೂರು-ಮುಂಬೈ ನಡುವೆ ಆರಂಭಿಸಿದರೆ ಮಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ನಡೆಸುವುದಿಲ್ಲವೇ? ಎಂಬ ಪ್ರಶ್ನೆ ಎದುರಾಗಿದೆ. ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ಮಾದರಿ ರೈಲು ಅಗತ್ಯವಾಗಿದೆ. ಅದು ಸ್ಲೀಪರ್ ಆದರೂ ಸರಿ ಅಥವ ಸಾಮಾನ್ಯ ರೈಲು ಆದರೂ ಸರಿ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ರೈಲ್ವೆ ಖಾತೆಯ ರಾಜ್ಯ ಸಚಿವರು ಕರ್ನಾಟಕದ ವಿ. ಸೋಮಣ್ಣ. ಆದ್ದರಿಂದ ಕರ್ನಾಟಕ ಕರಾವಳಿ ಭಾಗದ ಜನರ ಬೇಡಿಕೆಗೆ ಬೆಲೆ ನೀಡಿ ಅವರು ಮಂಗಳೂರು-ಮುಂಬೈ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಶೀಘ್ರವೇ ಒಪ್ಪಿಗೆ ಕೊಡಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ಮಾದರಿ ರೈಲು ಸಂಚಾರ ಆರಂಭವಾದರೆ ಜನರು ಹೆಚ್ಚು ಹಣ ನೀಡಿ ಉಭಯ ನಗರದ ನಡುವೆ ವಿಮಾನದಲ್ಲಿ ಸಂಚಾರ ನಡೆಸುವುದು ತಪ್ಪಲಿದೆ.












Click it and Unblock the Notifications