ಮಂಗಳೂರು: ಕಂಬಳದಲ್ಲೂ ನುಸುಳಿದ ರಾಜಕೀಯ; ಅಧ್ಯಕ್ಷ ಪಟ್ಟಕ್ಕಾಗಿ ಕಾಂಗ್ರೆಸ್- ಬಿಜೆಪಿ ಫೈಟ್!
ಮಂಗಳೂರು, ಡಿಸೆಂಬರ್ 21: ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ ಈಗ ರಾಜಕೀಯ ಗಾಳಿ ನುಸುಳಿದೆ. ಈವರೆಗೆ ಜಾತಿ- ಧರ್ಮ, ಪಕ್ಷ ಬೇಧ ಮರೆತು ನಡೆಯುತ್ತಿದ್ದ ಕಂಬಳಕ್ಕೀಗ ರಾಜಕೀಯ ಅಂಟಿಕೊಂಡಿದ್ದು, ಕಂಬಳ ಸಮಿತಿಯ ಅಧ್ಯಕ್ಷ ಪಟ್ಟಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ವೇಣೂರಿನ ಕುಕ್ಕೇಡಿ ಗ್ರಾಮದ ಪೆರ್ಬುಂಡ ಸೂರ್ಯ- ಚಂದ್ರ ಜೋಡುಕರೆ ಕಂಬಳದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ- ಕಾಂಗ್ರೆಸ್ ನಾಯಕರ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 28 ವರ್ಷಗಳಿಂದ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಪೆರ್ಬುಂಡ ಸೂರ್ಯ- ಚಂದ್ರ ಜೋಡುಕರೆ ಕಂಬಳ ನಡೆಯುತ್ತಿದ್ದು, ವಸಂತ ಬಂಗೇರ ಕಂಬಳದ ಗೌರಾವಾಧ್ಯಕ್ಷ ಮತ್ತು ಸ್ಥಳೀಯ ನಾಯಕ ನಿತೇಶ್. ಎಚ್. ಕೋಟ್ಯಾನ್ ಅಧ್ಯಕ್ಷರಾಗಿಯೂ ಕಂಬಳದ ನೇತೃತ್ವ ವಹಿಸಿಕೊಂಡಿದ್ದರು. ಆದರೆ ಈ ಬಾರಿ ಕಂಬಳದಲ್ಲಿ ಗೊಂದಲಗಳು ಉಂಟಾಗಿದೆ.

ಪ್ರಸಕ್ತ ಕಂಬಳ ನಡೆಯುವ ಗದ್ದೆ ಸ್ಥಳೀಯ ಗೋವಿಂದ ಭಟ್ ಎಂಬುವವರಿಗೆ ಸೇರಿದ್ದಾಗಿದ್ದು, ಈ ಬಾರಿ ಕಂಬಳ ನಡೆಸಬಾರದೆಂದು ತಗಾದೆ ಎತ್ತಿದ್ದಾರೆ. ಈ ನಡುವೆ ಕಂಬಳ ಸಮಿತಿ ಅವರ ಮನವೊಲಿಸಿ ಈ ಬಾರಿ ಅಲ್ಲೇ ಕಂಬಳ ನಡೆಸಿ ಮುಂದಿನ ಬಾರಿ ಬೇರೆ ಕಡೆ ಕಂಬಳಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು.
ಆದರೂ ಇದಕ್ಕೊಪ್ಪದ ಗೋವಿಂದ ಭಟ್ ಜೊತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತುಕತೆ ಮಾಡಿದ್ದು, ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಕಂಬಳ ನಡೆಯುವುದಿದ್ದರೆ ಜಾಗ ಬಿಟ್ಟುಕೊಡುತ್ತೇನೆ ಅಂತಾ ಹೇಳಿದ್ದಾರೆ. ಹೀಗಾಗಿ ಈ ಹಿಂದಿನ ಕಂಬಳ ಸಮಿತಿಯ ಬದಲು, ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಗಿದೆ. ಹೀಗಾಗಿ ಶಾಸಕ ಹರೀಶ್ ಪೂಂಜಾರವರು ಕಂಬಳವನ್ನು ಹೈಜಾಕ್ ಮಾಡುವುದಕ್ಕೆ ನೋಡುತ್ತಿದ್ದಾರೆ ಎಂದು ಈ ಹಿಂದಿನ ಕಂಬಳ ಸಮಿತಿ ಆರೋಪಿಸಿದೆ.

ಈ ಬಗ್ಗೆ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪೆರ್ಬುಂಡ ಸೂರ್ಯ- ಚಂದ್ರ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ನಿತೇಶ್. ಎಚ್. ಕೋಟ್ಯಾನ್, ಈ ವರ್ಷದ ಕಂಬಳ ನಿಗದಿತ ದಿನವಾದ ಮಾರ್ಚ್ 5ರಂದು ನಡೆಯಲಿದೆ. ಕಂಬಳಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ. ಜಿಲ್ಲಾ ಕಂಬಳ ಸಮಿತಿಯ ಜೊತೆಗೆ ಚರ್ಚೆ ಮಾಡಿ ಎಲ್ಲವನ್ನೂ ನಿಗದಿ ಮಾಡಿದ್ದೇವೆ. ಈ ನಡುವೆ ಶಾಸಕ ಹರೀಶ್ ಪೂಂಜಾ ಹೊಸ ಕಂಬಳ ಸಮಿತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ 28 ವರ್ಷಗಳಿಂದ ಪೆರ್ಬುಂಡ ಕಂಬಳ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ನಡೆಯುತ್ತಿದ್ದು, ಮುಂದೆಯೂ ಅವರ ನೇತೃತ್ವದಲ್ಲೇ ನಡೆಯಬೇಕೆನ್ನುವುದು ನಮ್ಮ ಆಶಯ. ಕೃಷಿಕರೇ ಸೇರಿ ನಡೆಸುವ ಕಂಬಳಕ್ಕೆ ಶಾಸಕ ಹರೀಶ್ ಪೂಂಜಾ ರಾಜಕೀಯವನ್ನು ಸೇರಿಸಿ ಹಸ್ತಕ್ಷೇಪ ನಡೆಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಕಂಬಳ ಗದ್ದೆಯ ಮಾಲೀಕ ಗೋವಿಂದ ಭಟ್, ನಿಮ್ಮ ನೇತೃತ್ವದಲ್ಲಿ ಕಂಬಳ ನಡೆದರೆ ಮಾತ್ರ ಕಂಬಳ ನಡೆಸಲು ಅವಕಾಶ ನೀಡುತ್ತೇನೆ ಅಂತಾ ಹೇಳಿದ ಕಾರಣಕ್ಕಾಗಿ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿದ್ದೇನೆ ಹೊರತು, ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ ಅಂತಾ ಹೇಳಿದ್ದಾರೆ.

ಶಾಸಕನಾಗಿರುವ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ನಿಂತು ಎಲ್ಲವನ್ನೂ ಮಾಡಲಾಗದ ಹಿನ್ನಲೆಯಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕಂಬಳದ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರೇ ಮುಂದುವರಿಯಲಿದ್ದಾರೆ. ಈ ಬಗ್ಗೆ ಯಾವುದೇ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಂಬಳದ ನೇತೃತ್ವಕ್ಕಾಗಿ ನಡೆಯುತ್ತಿರುವ ಸಮರ ಕಂಬಳ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಕಾರ್ಕಳ ಕಂಬಳದ ಉಸ್ತುವಾರಿಯನ್ನು ಶಾಸಕ ಸುನೀಲ್ ಕುಮಾರ್, ಮೂಡಬಿದಿರೆಯ ಕಂಬಳ ಉಸ್ತುವಾರಿಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ವಹಿಸಿದಂತೆ ಬೆಳ್ತಂಗಡಿಯ ಕಂಬಳದ ಉಸ್ತುವಾರಿಯನ್ನು ಶಾಸಕ ಹರೀಶ್ ಪೂಂಜಾ ವಹಿಸಲು ನೋಡುತ್ತಿದ್ದಾರೆ. ಕಂಬಳದಲ್ಲಿ ರಾಜಕೀಯ ಬೆರೆಸುವುದು ತಪ್ಪು ಎಂದು ಕಂಬಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications