ಮಂಗಳೂರಲ್ಲಿ ಮಕ್ಕಳ ರಾಷ್ಟ್ರಮಟ್ಟದ ಕೃಷ್ಣ ವೇಷ ಸ್ಪರ್ಧೆ
ಮಂಗಳೂರು, ಆಗಸ್ಟ್, 19 : ಪೋಷಕರೇ ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲಿ ಕೃಷ್ಣ ವೇಷ ಹಾಕಿ ಫೋಟೋ ತೆಗೆಸಿ ಖುಷಿ ಪಡ್ತಾ ಇರ್ತಿದ್ರಿ ಅಲ್ವ. ಇದೀಗ ಈ ಖುಷಿಯನ್ನು ನೀವು ರಾಷ್ಟ್ರಮಟ್ಟದ ವೇದಿಕೆಯಲ್ಲಿಯೂ ಹಂಚಿಕೊಳ್ಳಲು ಅವಕಾಶ ಒದಗಿದೆ.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಸೆ. 5ರ ಮಧ್ಯಾಹ್ನ 1ರಿಂದ ಪುಟಾಣಿಗಳಿಗಾಗಿ ರಾಷ್ಟ್ರಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಜರಗಲಿದೆ. [ನನ್ನ ಅಮ್ಮ ಕಳೆದುಹೋಗಿದ್ದಾರೆ, ಯಾರಾದರೂ ಹುಡುಕಿಕೊಡಿ]

ನವಜಾತ ಶಿಶುವಿನಿಂದ ಹಿಡಿದು 7ನೇ ತರಗತಿ ವರೆಗಿನ ಮಕ್ಕಳಿಗೆ ಒಟ್ಟು 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಏಕಕಾಲದಲ್ಲಿ 8 ವೇದಿಕೆಗಳಲ್ಲಿ ಮಕ್ಕಳ ಉತ್ಸವ ಆಯೋಜಿಸಲಾಗಿದ್ದು, ಈ ಬಾರಿ ಶ್ರೀಕೃಷ್ಣ ವರ್ಣ ವೈಭವ ಮುಕ್ತ ಚಿತ್ರಕಲಾ ಸ್ಪರ್ಧೆಯನ್ನು (ಒಟ್ಟು 6 ವಿಭಾಗದಲ್ಲಿ) ಸೇರಿಸಿಕೊಳ್ಳಲಾಗಿದೆ.
ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ಸಾಂಪ್ರದಾಯಿಕ ಉಡುಗೆಯೊಂದಿಗೆ ಶಂಖನಾದ, ಸಾಂಪ್ರದಾಯಿಕ ಉಡುಗೆಯೊಂದಿಗೆ ಶಂಖ ಉದ್ಘೋಷ, ದೇವಕಿ ಕೃಷ್ಣ, ಯಶೋದೆ ಕೃಷ್ಣ (ಮುಕ್ತ ವಿಭಾಗ), ವಸುದೇವ ಕೃಷ್ಣ, ರಾಧಾಕೃಷ್ಣ (ಜೋಡಿ), ಯಕ್ಷ ಕೃಷ್ಣ, ನಂದಗೋಕುಲ (ಸಮೂಹ ವಿಭಾಗ), ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ಜೀನವನಾಧರಿತ ರಸಪ್ರಶ್ನೆ, ಛಾಯಾ ಕೃಷ್ಣ , ಶ್ರೀ ಕೃಷ್ಣವರ್ಣ ವೈಭವ ನಡೆಯಲಿದೆ.
ಪ್ರವೇಶ ಉಚಿತವಾಗಿದ್ದು, ಪ್ರವೇಶ ಪತ್ರಗಳನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕಲ್ಕೂರ ಪ್ರತಿಷ್ಠಾನ ಕೊಡಿಯಾಲ್ ಬೈಲ್, ಶಾರದಾ ವಿದ್ಯಾಲಯದ ದಯಾನಂದ ಕಟೀಲು, ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಗೋಕುಲ್ ಕದ್ರಿ, ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಮಲ್ಲಿಕಟ್ಟೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿಗಳು ಫಳ್ನೀರು ಇಲ್ಲಿ ಪಡೆಯಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.












Click it and Unblock the Notifications