ದಕ್ಷಿಣ ಕನ್ನಡ ಜನರ ಹಲವು ವರ್ಷಗಳ ಬೇಡಿಕೆಗೆ ಒಪ್ಪಿದ ಕರ್ನಾಟಕ ಸರ್ಕಾರ
ಮಂಗಳೂರು, ಫೆಬ್ರವರಿ 25: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಚತುಷ್ಪಥ ಹೆದ್ದಾರಿ ಯೋಜನೆ ನಿರ್ಮಾಣದ ವಿಸ್ತೃತ ಯೋಜನಾ ವರದಿ (ಡಿಪಿಆರ್) ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ಕೊಟ್ಟಿದೆ. ಇದಕ್ಕಾಗಿ 3.19 ಕೋಟಿ ರೂ. ಅನುದಾನವನ್ನು ಏಜೆನ್ಸಿ ವೆಚ್ಚದಡಿ ಭರಿಸುವುದಕ್ಕೆ ಅನುಮೋದನೆ ನೀಡಿ ಆದೇಶವನ್ನು ಹೊರಡಿಸಿದೆ.
ದಕ್ಷಿಣ ಕನ್ನಡ ಕ್ಷೇತ್ರದ ಸಂಸದ, ಬಿಜೆಪಿ ನಾಯಕ ಕ್ಯಾ. ಬ್ರಿಜೇಶ್ ಚೌಟ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. 'ಮಾಣಿ-ಸಂಪಾಜೆ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್‌ಗೆ ಅನುಮೋದನೆ ದೊರಕಿರುವುದು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ' ಎಂದು ಹೇಳಿದ್ದಾರೆ.

'ನಮ್ಮ ಮನವಿಗೆ ಸ್ಪಂದಿಸಿ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ 71.60 ಕಿ. ಮೀ. ದೂರದ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ' ಎಂದು ತಿಳಿಸಿದ್ದಾರೆ.
'ರಸ್ತೆ ಅಗಲೀಕರಣಕ್ಕೆ ಡಿಪಿಆರ್ ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕಗೊಳಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವಾದ 3.19 ಕೋಟಿ ರೂ. ಅನ್ನು ಏಜೆನ್ಸಿ ವೆಚ್ಚದಡಿ ಭರಿಸುವುದಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ' ಎಂದು ಸಂಸದರು ಮಾಹಿತಿ ನೀಡಿದ್ದಾರೆ.
'ಮಾಣಿ-ಸಂಪಾಜೆ ಹೆದ್ದಾರಿಯನ್ನು ಕೂಡ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಡಿಪಿಆರ್‌ಗೆ ಸಂಬಂಧಿಸಿದಂತೆ 2022ರಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯು ನಾನಾ ಕಾರಣಗಳಿಂದ ನೆನೆಗುದ್ದಿಗೆ ಬಿದ್ದಿತ್ತು. ಅಲ್ಲದೇ ಹಿಂದಿನ ಪ್ರಸ್ತಾವನೆಯಲ್ಲಿ ಯಾವುದೇ ಪ್ರಗತಿಯನ್ನು ಕಾಣದ ಕಾರಣ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಇದೇ ವರ್ಷದ ಜನವರಿ ತಿಂಗಳಿನಲ್ಲಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ, ಲೋಕೋಪಯೋಗಿ ಇಲಾಖೆಗೆ ಡಿಪಿಆರ್‌ಗೆ ಅನುಮತಿಸಲು ಕ್ರಮ ಜರುಗಿಸುವಂತೆ ಕೋರಲಾಗಿತ್ತು ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಲು ಇಚ್ಛಿಸುತ್ತೇನೆ' ಎಂದು ಸಂಸದರು ವಿವರಣೆ ಕೊಟ್ಟಿದ್ದಾರೆ.
ಅನುದಾನ ಬಳಕೆಗೆ ಆದೇಶ: ಡಿಪಿಆರ್ ತಯಾರು ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಇವರು ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿಗಳು (ದಕ್ಷಿಣ), ಕೆ. ಆರ್. ವೃತ್ತ, ಬೆಂಗಳೂರು ಇವರಿಗೆ ಪತ್ರವನ್ನು ಬರೆದಿದ್ದಾರೆ. ಅನುದಾನದ ಕುರಿತು ಮಾಹಿತಿ ನೀಡಿದ್ದಾರೆ.
ಎನ್‌ಹೆಚ್-275 ಮಾಣಿ-ಮೈಸೂರು-ಬೆಂಗಳೂರು ಮಾರ್ಗದಲ್ಲಿ ಮಾಣಿ-ಸಂಪಾಜೆ ನಡುವಿನ 71.60 ಕಿ. ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲು ಡಿಪಿಆರ್ ತಯಾರು ಮಾಡಲು ಸಮಾಲೋಚಕರನ್ನು ನೇಮಿಸಲು ಅನುಮತಿ ಹಾಗೂ ಇದಕ್ಕೆ ತಗಲುವ ವೆಚ್ಚ ರೂ. 3.1948 ಕೋಟಿಗಳನ್ನು (ಜಿಎಸ್‌ಟಿ ಹೊರತುಪಡಿಸಿ) ಏಜೆನ್ಸಿ ಚಾರ್ಜಸ್ ಅಡಿಯಲ್ಲಿ ಭರಿಸಲು ಅನುಮೊದನೆ ನೀಡುವಂತೆ ಕೋರಿರುತ್ತೀರಿ.
ಸಮರ್ಥನೆ ಹಾಗೂ ಶಿಫಾರಸ್ಸಿನ ಮೇರೆಗೆ ಮೇಲ್ದಂಡ ಕಾಮಗಾರಿಯ ಡಿಪಿಆರ್ ಕಾರ್ಯಕ್ಕೆ ತಗಲುವ ಅಂದಾಜು ಮೊತ್ತ ರೂ. 3.1948 ಕೋಟಿಗಳ ಮೊತ್ತ ಹಾಗೂ ಜಿಎಸ್‌ಟಿ ಮೊತ್ತವನ್ನು ಭರಿಸಲು ಸಹಮತಿ ನೀಡಲಾಗಿದ್ದು, ಸಮಾಲೋಚಕರ ನೇಮಕಕ್ಕೆ ನಿಯಮಾನುಸಾರ ಟೆಂಡರ್ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications