ಬಾರ್‌ಗಳೂ ಇಲ್ಲದ ಈ ಪ್ರದೇಶದಲ್ಲೀಗ ಡ್ರಗ್ಸ್ ಸಾಮ್ರಾಜ್ಯ: ಮಾದಕ ವ್ಯಸನಿಗಳಿಂದ ಹೈರಣಾದ ಬೆಂಗ್ರೆ ಜನ
ಮಂಗಳೂರು, ಆಗಸ್ಟ್ 27: ಮಂಗಳೂರು ನಗರದ ಬಂದರು ಪ್ರದೇಶದಿಂದ ಅನತಿ ದೂರದಲ್ಲಿಯೇ ಇದೆ ಬೆಂಗ್ರೆ ಪ್ರದೇಶ. ದ್ವೀಪ ಪ್ರದೇಶವಾದ ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ ಒಂದೇ ಒಂದು ಮದ್ಯದಂಗಡಿ, ಬಾರ್‌ಗಳಿಲ್ಲ. ಆದರೆ ಸದ್ಯ ಈ ಬೆಂಗ್ರೆಯೆಂಬ ದ್ವೀಪವು ಮಾದಕ ವ್ಯಸನಿಗಳ ಕೂಪವಾಗಿದೆ. ಇಡೀ ಗ್ರಾಮವನ್ನೇ ಆವರಿಸಿರುವ ಈ ವ್ಯಸನವನ್ನು ಮುಕ್ತ ಮಾಡುವುದೇ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.
ಕಸ್ಬಾ ಬೆಂಗ್ರೆ, ತೋಟ ಬೆಂಗ್ರೆ ಹಾಗೂ ತಣ್ಣೀರುಬಾವಿ ಪ್ರದೇಶಗಳಲ್ಲಿ ಮೂರು ದಶಕಗಳ ಹಿಂದೆಯೇ ಮದ್ಯದಂಗಡಿ ತಲೆಯೆತ್ತದಂತೆ ಹಿರಿಯರು ಮಾಡಿದ್ದರು. ಬಹಿಷ್ಕಾರದ ಭೀತಿಯಿಂದ ಈಗಲೂ ಈ ಆಜ್ಞೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಆದರೆ ಇದೀಗ ಡ್ರಗ್ಸ್, ಗಾಂಜಾ ಎಂಬ ಮಾದಕಜಾಲ ಸದ್ದಿಲ್ಲದೆ ಯುವಜನತೆಯ ಒಳಹೊಕ್ಕಿ ಇಡೀ ಗ್ರಾಮದ ನೆಮ್ಮದಿಯನ್ನೇ ಹಾಳುಗೆಡವಿದೆ. ಕಳೆದ ಐದು ವರ್ಷಗಳಲ್ಲಿ ಪಣಂಬೂರು ಠಾಣೆಯಲ್ಲಿ ಬೆಂಗ್ರೆ ವ್ಯಾಪ್ತಿಯ ಗಾಂಜಾ, ಮಾದಕ ದ್ರವ್ಯದ 132 ಪ್ರಕರಣಗಳು ದಾಖಲಾಗಿದೆ. 2.92ಲಕ್ಷ ರೂ. ಮೊತ್ತದ ಮಾದಕದ್ರವ್ಯ ವಶಪಡಿಸಿಕೊಂಡಲ್ಲಿ, 158 ಮಂದಿ ಬಂಧನಕ್ಕೊಳಗಾಗಿದ್ದಾರೆ.

ಡ್ರಗ್ಸ್ ಚಟ ಎಷ್ಟು ಇಲ್ಲಿನ ಜನರ ನಿದ್ದೆಗೆಡಿಸಿದೆಯೆಂದರೆ, ಮದುವೆಗೆ ಸಂಬಂಧವೂ ಕೂಡಿಬರುತ್ತಿಲ್ಲ. ಹುಡುಗಿ ಮನೆಯವರು ಇಲ್ಲಿನ ಯುವಕರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇದರಿಂದ ಕೂಡಿ ಬಂದ ಸಂಬಂಧಗಳೂ ದೂರವಾಗುತ್ತಿದೆ. ಇದೀಗ ಇಲ್ಲಿನ ಮುಖಂಡರು ಸೇರಿ ಇತ್ತೀಚೆಗೆ ಮಂಗಳೂರು ಪೊಲೀಸ್ ಕಮಿಷನರ್ ರಿಂದ 'ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನ'ದಡಿ ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಿದ್ದರು.
ಈ ವೇಳೆ ಸಾರ್ವಜನಿಕರಿಂದ ಮಾದಕದ್ರವ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಡ್ರಗ್ಸ್‌ನಿಂದ ಮನೆಯಲ್ಲಿ ನೆಮ್ಮದಿಯಿಲ್ಲ, ಕುಟುಂಬ ಕಲಹ ಹೆಚ್ಚುತ್ತಿದೆ, ಮದುವೆಗೆ ಸಂಬಂಧ ಕೂಡಿ ಬರುತ್ತಿಲ್ಲ ಹೀಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಮಹಿಳೆಯರು ಕಮಿಷನರ್‌ರಲ್ಲಿ ಅಲವತ್ತುಕೊಂಡಿದ್ದಾರೆ. ಆದ್ದರಿಂದ ಬೆಂಗ್ರೆಯಲ್ಲಿ ಒಂದು ಮುಕ್ತ ಸಂವಾದಕ್ಕಿಂತ ನಿರಂತರ ಜಾಗೃತಿಯ ಅಗತ್ಯವಿದೆ.
ಬೆಂಗ್ರೆ ಪ್ರದೇಶದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರುತ್ತಿದ್ದು,ಡ್ರಗ್ಸ್ ವ್ಯಸನಿಗಳ ವಿರುದ್ಧ ದೂರುಕೊಟ್ಟರೆ ಮಾನಸಿಕ ಅಸ್ವಸ್ಥನೆಂದು ಸರ್ಟಿಫಿಕೇಟ್ ತೋರಿಸುತ್ತಾರೆ ಎಂದು ಬೆಂಗ್ರೆ ಪ್ರದೇಶದ ಜನರು ಅಳಲು ತೋಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ತೋಟಬೆಂಗ್ರೆ ಪ್ರದೇಶದಲ್ಲಿ ಡ್ರಗ್ಸ್ ವ್ಯಸನಿಗಳ ಹಾವಳಿ ಜಾಸ್ತಿಯಾಗಿದ್ದು, ಡ್ರಗ್ಸ್ ಚಟದಿಂದ ಬೆಂಗ್ರೆ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದೆ. ಈ ಬಗ್ಗೆ ದೂರು ನೀಡಿದ್ದಲ್ಲಿ ಆರೋಪಿ ಮಾನಸಿಕ ಅಸ್ವಸ್ಥ ಎಂದು ಆರೋಪಿಯ ಮನೆಯವರು ಸರ್ಟಿಫಿಕೇಟ್ ಹಿಡಿದುಕೊಂಡು ಬರುತ್ತಾರೆ. ದ.ಕ ಜಿಲ್ಲಾಸ್ಪತ್ರೆ ಯಿಂದ ಸರ್ಟಿಫಿಕೇಟ್ ನೀಡುತ್ತಿರೋದಾಗಿ ಗ್ರಾಮಸ್ಥರ ಆರೋಪಿಸಿದ್ದಾರೆ.
ಈಗಾಗಲೇ ಇಂತಹ ಮೂರು ಪ್ರಕರಣಗಳು ನಡೆದಿದೆ. ಡ್ರಗ್ಸ್ ಸೇವಿಸಿ ಯುವಕರ ಗುಂಪು ಹೊಡೆದಾಡಿಕೊಂಡಿದ್ದಾರೆ.ಈ ಬಗ್ಗೆ ಪೊಲೀಸ್ ಠಾಣೆಗೆ ಜಮಾತ್ ಪ್ರಮುಖರು ದೂರು ನೀಡಿದ್ದರು. ಆದರೆ ಗಲಾಟೆ ಮಾಡಿದವನು ಮಾನಸಿಕ ಅಸ್ವಸ್ಥ ಎಂದು ಸರ್ಟಿಫಿಕೇಟ್ ತಂದು ಮನೆಯವರು ಬಿಡಿಸಿಕೊಂಡಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಜಮಾತ್ ಕಮಿಟಿ ಡ್ರಗ್ಸ್ ದಾಸರನ್ನು ಗ್ರಾಮದಿಂದಲೇ ಹೊರ ಹಾಕುವಂತೆ ಮನವಿ ಮಾಡಿದ್ದಾರೆ.












Click it and Unblock the Notifications