ಎಂಟು ವರ್ಷದ ಬಳಿಕ ಪತ್ತೆಯಾದ ಕನ್ನಡಿಗ ಸೇರಿ 29 ಯೋಧರಿದ್ದ ಸೇನಾ ವಿಮಾನ
8 ವರ್ಷಗಳ ಬಳಿಕ ಸಮುದ್ರದ ಆಳದಲ್ಲಿ ಭಾರತೀಯ ಸೇನಾ ವಿಮಾನ ಪತ್ತೆಯಾಗಿದೆ. ಚೆನ್ನೈ ನೌಕಾನೆಲೆಯಿಂದ 310 ಕಿಲೋಮೀಟರ್ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಅಂದು ಕಣ್ಮರೆಯಾಗಿದ್ದ ವಿಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥಶೆಟ್ಟಿ ಸೇರಿದಂತೆ 29 ಜನರಿದ್ದರು.
ಸೇನಾ ಕರ್ತವ್ಯದ ನಿಮಿತ್ತ ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ 2016ರ ಜುಲೈ 22ರಂದು ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್-32 ಯುದ್ಧ ವಿಮಾನ ಬಂಗಾಳಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ನಿಗೂಡವಾಗಿತ್ತು. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಅಂದು ನಾಪತ್ತೆಯಾದ ವಿಮಾನ ಇದೀಗ ಪತ್ತೆಯಾಗಿದೆ ಎಂದು ವಾಯುಸೇನಾ ಪ್ರಕಟಣೆ ಹೊರಡಿಸಿದೆ.

ಪತ್ತೆಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳು ನಡೆಸಿದ್ದ ಯತ್ನಗಳು ವಿಫಲವಾಗಿದ್ದವು. ಇದಕ್ಕಾಗಿ ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ವಿಮಾನವೊಂದು ಕುರುಹೇ ಇಲ್ಲದಂತೆ ನಾಪತ್ತೆಯಾಗಿರುವುದು ವಾಯುಪಡೆಯ ಇತಿಹಾಸದಲ್ಲೇ ಮೊದಲು ಎನ್ನುವಂತಾಗಿತ್ತು.
ಚೆನ್ನೈ ಕರಾವಳಿಯಿಂದ 310 ಕಿ.ಮೀ. ದೂರದಲ್ಲಿ ಪತ್ತೆ
ಭಾರತೀಯ ವಾಯುಪಡೆಯ AN-32 ವಿಮಾನ, 22 ಜುಲೈ 2016 ರಂದು ಬಂಗಾಳ ಕೊಲ್ಲಿಯಲ್ಲಿ ಆಪ್ ಕಾರ್ಯಾಚರಣೆಯ ಸಮಯದಲ್ಲಿ ನಾಪತ್ತೆಯಾಗಿತ್ತು. ಈ ವಿಮಾನದಲ್ಲಿ 29 ಸಿಬ್ಬಂದಿ ಇದ್ದರು. ವಿಮಾನ ಮತ್ತು ಹಡಗುಗಳ ದೊಡ್ಡ ಪ್ರಮಾಣದ ಹುಡುಕಾಟ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳು ಯಾವುದೇ ಕಾಣೆಯಾದ ಸಿಬ್ಬಂದಿ ಅಥವಾ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ, ಇತ್ತೀಚೆಗೆ ಆಳ ಸಮುದ್ರದ ಅನ್ವೇಷಣೆಯೊಂದಿಗೆ ಸ್ವಾಯತ್ತ ನೀರೊಳಗಿನ ವಾಹನವನ್ನು (AUV) ನಿಯೋಜಿಸಿತ್ತು.
ಕಾಣೆಯಾದ ಎಎನ್-32 ಕೊನೆಯದಾಗಿ ತಿಳಿದಿರುವ ಸ್ಥಳದಲ್ಲಿ ಮಲ್ಟಿ-ಬೀಮ್ ಸೋನಾರ್ (ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್), ಸಿಂಥೆಟಿಕ್ ಅಪರ್ಚರ್ ಸೋನಾರ್ ಮತ್ತು ಹೈ ರೆಸಲ್ಯೂಶನ್ ಫೋಟೋಗ್ರಫಿ ಸೇರಿದಂತೆ ಬಹು ಪೇಲೋಡ್‌ಗಳನ್ನು ಬಳಸಿಕೊಂಡು 3400 ಮೀ ಆಳದಲ್ಲಿ ಈ ಹುಡುಕಾಟವನ್ನು ನಡೆಸಲಾಯಿತು. ಹುಡುಕಾಟ ಚಿತ್ರಗಳ ವಿಶ್ಲೇಷಣೆಯು ಚೆನ್ನೈ ಕರಾವಳಿಯಿಂದ ಸರಿಸುಮಾರು 140 ನಾಟಿಕಲ್ ಮೈಲುಗಳಷ್ಟು (ಅಂದಾಜು. 310 ಕಿಮೀ) ಸಮುದ್ರದ ತಳದಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಹುಡುಕಾಟದ ಚಿತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು ಮತ್ತು ಎಎನ್-32 ವಿಮಾನದಂತೆ ಕಂಡುಬಂದಿದೆ. ಸಂಭವನೀಯ ಅಪಘಾತದ ಸ್ಥಳದಲ್ಲಿ ಈ ಆವಿಷ್ಕಾರವು, ಅದೇ ಪ್ರದೇಶದಲ್ಲಿ ಯಾವುದೇ ಇತರ ಕಾಣೆಯಾದ ವಿಮಾನದ ವರದಿಯ ಯಾವುದೇ ದಾಖಲಿತ ಇತಿಹಾಸವಿಲ್ಲದೆ, ಅವಶೇಷಗಳು ಬಹುಶಃ ಅಪಘಾತಕ್ಕೀಡಾದ ಐಎಎಫ್ ಎಎನ್-32 (K-2743) ಗೆ ಸೇರಿದೆ ಎಂದು ಹೇಳಲಾಗಿದೆ.
ಏಕನಾಥ ಶೆಟ್ಟಿ ಕುಟುಂಬ ಪರಿಸ್ಥಿತಿ ಹೇಗಿದೆ?
ಅಂದಿನಿಂದ ಇಂದಿನವರೆಗೂ ಏಕನಾಥ ಶೆಟ್ಟಿಯವರ ಪತಿಯ ಬರುವಿಕೆಯ ನಿರೀಕ್ಷೆಯಲ್ಲಿ ಪತ್ನಿ ಜಯಂತಿ ಶೆಟ್ಟಿ, ಮಕ್ಕಳಾದ ಅಕ್ಷಯ್, ಆಶಿಕಾ ಶೆಟ್ಟಿ ಮತ್ತು ಕುಂಬಸ್ಥರು ಕಾಯುತ್ತಿದ್ದಾರೆ. ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಭಾಗಿ ಏಕನಾಥ ಅವರು ಮಾಜಿ ಸೈನಿಕ ದಿವಂಗತ ಕೃಷ್ಣ ಶೆಟ್ಟಿ ಮತ್ತು ಸುನಂದಾ ದಂಪತಿಯ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ 1965ರ ಜೂ. 30ರಂದು ಮಂಗಳೂರಿನ ಕುತ್ತಾರಿನಲ್ಲಿ ಜನಿಸಿದ್ದರು. ಪಿಯುಸಿ ಮುಗಿಸಿ 1985ರಲ್ಲಿ ಭೂ ಸೇನೆ (ಮದ್ರಾಸ್ ರೆಜಿಮೆಂಟ್)ಗೆ ಸೇರ್ಪಡೆಗೊಂಡು ತಮಿಳುನಾಡಿನ ವೆಲ್ಲಿಂಗ್‌ಟನ್‌ನಲ್ಲಿ ತರಬೇತಿ ಮುಗಿಸಿ, ಶ್ರೀಲಂಕಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಕಾಶ್ಮೀರ ಸಹಿತ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮದ್ರಾಸ್ ರೆಜಿಮೆಂಟ್‌ನಲ್ಲಿ ನಾಯಕ್ ಹುದ್ದೆಗೆ ಪದೋನ್ನತಿ ಹೊಂದಿ 1999ರಲ್ಲಿ ನಡೆದ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ (ಆಪರೇಷನ್ ವಿಜಯ್) ಪಡೆದುಕೊಂಡಿದ್ದರು.
ಸಿಗದ ಉದ್ಯೋಗ, ಸರಕಾರಿ ಜಾಗ
ಏಕನಾಥ ಅವರ ಪತ್ನಿ ಜಯಂತಿ ಎಂ. ಪ್ರಸಕ್ತ ಪೆರಿಂಜೆ ಎಸ್‌ಡಿಎಂ ಶಾಲಾ ಶಿಕ್ಷಕಿಯಾಗಿದ್ದು, ಪುತ್ರಿ ಆಶಿಕಾ ಎಂಜಿನಿಯರಿಂಗ್ ಪೂರ್ಣಗೊಳಿಸಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರ ಅಕ್ಷಯ್ ಎಂ. ಸಾಫ್ಟ್‌ವೇರ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಪುತ್ರಿಗೆ ಇತ್ತೇಚೆಗೆ ವಿವಾಹವಾಗಿದ್ದು ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದು ಅದು ಈಡೇರಿಲ್ಲ. ಅತ್ತ ಸರಕಾರದಿಂದ ನಿವೃತ್ತ ಯೋಧರಿಗೆ ನೀಡಬೇಕಿದ್ದ ಸರಕಾರಿ ಸ್ಥಳವೂ ದೊರೆತಿಲ್ಲ. ಎಲ್ಲವೂ ಭರವಸೆಯಾಗಿಯೇ ಉಳಿದಿವೆ.












Click it and Unblock the Notifications