ಬಿಜೆಪಿ ಚುನಾವಣಾ ಭೀತಿಯಿಂದ ಹಿಂದೂ ಕಾರ್ಯಕರ್ತರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ- ಹಿಂದೂ ಮಹಾಸಭಾ
ಮಂಗಳೂರು ಡಿಸೆಂಬರ್ 27: ಬಿಜೆಪಿ ಚುನಾವಣಾ ಭೀತಿಯಿಂದ ಹಿಂದೂ ಕಾರ್ಯಕರ್ತರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ರಾಜೇಶ್ ಪವಿತ್ರನ್ ಆರೋಪಿಸಿದ್ದಾರೆ.
ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯು ಚುನಾವಣಾ ಭೀತಿಯಿಂದ ಹಿಂದೂ ಕಾರ್ಯಕರ್ತರು, ನಾಯಕರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಆರೋಪಗಳನ್ನು ಹೊರಿಸಿ ಜೈಲಿಗಟ್ಟುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಪ್ರಮುಖವಾಗಿ ಹಿಂದೂ ಮಹಾಸಭಾದ ನಾಯಕರ ಕೆಲಸ ಮಾಡುವ ಇಚ್ಛಾಶಕ್ತಿಯನ್ನು ಕುಗ್ಗಿಸುವ, ಪಕ್ಷದ ಚಟುವಟಿಕೆಗಳನ್ನು ನಿಲ್ಲಿಸುವಂತಹ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ನನ್ನ ಮೇಲೆ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಸುಳ್ಳು ಸುಲಿಗೆ, ಬೆದರಿಕೆ ಕೇಸ್ ಹಾಕಿ ಆರೋಪಿಸಿ ಜೈಲಿಗಟ್ಟಲು ಯತ್ನಿಸಿತ್ತು. ಆದರೆ ಕೋರ್ಟ್ ಅವರಿಗೆ ಛೀಮಾರಿ ಹಾಕಿ ಬೇಲ್ ನೀಡಿದೆ ಎಂದು ಹೇಳಿದ್ದಾರೆ.

ಮಾತು ಮುಂದುವರಿಸಿದ ಅವರು, ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ಹಿಂದೂ ಸಮುದಾಯ ಮಾತನಾಡುತ್ತಿದೆ. ಹಿಂದೂ ಮಹಾಸಭಾ ಕೂಡಾ ಹಿಂದೂ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ಎಲ್ಲಾ 224 ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸಲಿದೆ. ಜನವರಿ 15ರಂದು ಬೆಂಗಳೂರಿನಲ್ಲಿ ಹಿಂದೂ ಮಹಾಸಭಾದ ಪುನಶ್ಚೇತನ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ ಎಂದರು.
ಅಂದು 83 ಮಂದಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಇದನ್ನು ಕಂಡು ಹಿಂದೂ ಮಹಾಸಭಾದ ಮನೋಬಲ ಕುಗ್ಗಿಸಲು ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದು, ನಿಜವಾಗಿ ಅಧಿಕಾರಕ್ಕೆ ಬರಬೇಕೆಂದು ಇದ್ದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಯತ್ನಿಸಿ, ನಾವು ಚುನಾವಣೆಯಲ್ಲೇ ಉತ್ತರ ಕೊಡುತ್ತೇ ಎಂದು ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ, ಸಂಘ ಪರಿವಾರದ ದೊಡ್ಡ ಹುದ್ದೆಯಲ್ಲಿದ್ದವರು, ಕಾಂಗ್ರೆಸ್‌ನ ನಾಯಕರು ಹಿಂದೂ ಮಹಾಸಭಾಕ್ಕೆ ಸೇರ್ಪಡೆಗೊಳ್ಳುತ್ತಿದಾರೆ. ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲ. ಅದಕ್ಕೆ ನಮ್ಮ ಅವಶ್ಯಕತೆ ಇರುವ ಕಾರಣ ನಾವು ಚುನಾವಣಾ ಅಖಾಡಕ್ಕೆ ಇಳಿದಿದ್ದೇವೆ. ಆದ್ದರಿಂದ ನಮ್ಮೆಲ್ಲಾ ಶಕ್ತಿಯನ್ನು ಒಟ್ಟು ಮಾಡಿಕೊಂಡು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಬಿಜೆಪಿಯವರಿಗೆ ತಡೆಯಲು ಶಕ್ತಿ ಇದ್ದಲ್ಲಿ ತಡೆಯಲಿ ಎಂದು ರಾಜೇಶ್ ಪವಿತ್ರನ್ ಸವಾಲು ಹಾಕಿದ್ದಾರೆ.












Click it and Unblock the Notifications