'ಕಾವೇರಿ ಕನ್ನಡ ಮೀಡಿಯಂ' ಧಾರವಾಹಿ ತಂಡಕ್ಕೆ ಸಂಕಷ್ಟ: ಮಂಗಳೂರಿನಲ್ಲಿ ದೂರು ದಾಖಲು
ಮಂಗಳೂರು, ಫೆಬ್ರವರಿ 10: ಇತ್ತೀಚಿಗೆ ದೈವಾರಾಧನೆಯನ್ನು ಮನೋರಂಜನೆಗೆ ಬಳಸಲಾಗುತ್ತಿದೆ ಎನ್ನುವ ಆರೋಪವನ್ನು ದೈವಾರಾಧಕರು ಮಾಡುತ್ತಿದ್ದು, ಇದು ನಿಜ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ತುಳುನಾಡಿನ ಜನರ ನಂಬಿಕೆಯನ್ನು ಮನೋರಂಜನೆ ಬಳಸಲಾಗುತ್ತಿದೆ. ನೃತ್ಯಗಳಲ್ಲಿ, ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ಮನಬಂದಂತೆ ಬಳಸಿಕೊಳ್ಳಲಾಗುತ್ತಿದ್ದು, ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಖಾಸಗಿ ಚಾನೆಲ್‌ನ ಧಾರವಾಹಿವೊಂದರಲ್ಲಿ ದೈವಾರಾಧನೆಯ ಪ್ರದರ್ಶನ ಮಾಡಲಾಗಿದ್ದು, ದೈವಾರಾಧಕರು ಧಾರವಾಹಿ ತಂಡದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ 'ಕಾವೇರಿ ಕನ್ನಡ ಮೀಡಿಯಂ' ಧಾರವಾಹಿಯಲ್ಲಿ ದೈವಾರಾಧನೆಯ ಪ್ರದರ್ಶನ ಮಾಡಲಾಗಿದೆ. ದೈವಾರಾಧನೆಯನ್ನು ಬಳಸಿಕೊಂಡು ಮಾಡಿರುವ ಚಿತ್ರೀಕರಣದ ಪ್ರೋಮೋ ಕೂಡ ವೈರಲ್ ಆಗಿದೆ.

ಈ ಹಿನ್ನೆಲೆಯಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಮತ್ತು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ದೈವದ ಪಾತ್ರ ಮಾಡಿದ ಪ್ರಶಾಂತ್ ಸಿಕೆ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ದೈವಾರಾಧನೆಯ ಚಿತ್ರೀಕರಣ ಪ್ರಸಾರ ಮಾಡದಂತೆ ತಡೆಯುವಂತೆ ದೈವಾರಾಧಕರು ದೂರು ನೀಡಿದ್ದಾರೆ.
ದೈವದ ವೇಷಭೂಷಣ ತೊಟ್ಟು ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಛದ್ಮ ವೇಷದಂತೆ ದೈವದ ವೇಷ ತೊಟ್ಟು ನಂಬಿಕೆಗೆ ಅವಮಾನ ಮಾಡಲಾಗುತ್ತಿದೆ. ದೈವಾರಾಧನೆ ಮಾಡುವ ಸಮುದಾಯದವರಿಗೂ ಅನ್ಯಾಯವಾಗುತ್ತಿದೆ. ಹಿಂದೂ ಧಾರ್ಮಿಕ ನಂಬಿಕೆಗಳನ್ನು ಘಾಸಿ ಮಾಡಿದ ಧಾರವಾಹಿ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೈವಾರಾಧಕರು ನೀಡಿರುವ ದೂರಿನಲ್ಲಿರುವುದೇನು..?
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹಾಸ್ಯ ಕಲಾವಿದ, ನಿರೂಪಕ ಪ್ರಶಾಂತ್ ಸಿಕೆ ಎನ್ನುವವರು ಕನ್ನಡ ಧಾರವಾಹಿ ಒಂದಕ್ಕೆ ದೈವದ ವೇಷಭೂಷಣ ತೊಟ್ಟು, ದೈವ ಕೋಲದ ಅನುಕರಣೆ ಮಾಡುವ ಮೂಲಕ ನಮ್ಮ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ವಾದ್ಯಕೋಶಗಳ ನುಡಿಸುವವರಿಗೆ ದೈವಸ್ಥಾನದಲ್ಲಿ ಕೋಲ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿರುತ್ತಾರೆ ಮತ್ತು ಇದೊಂದು ವರ್ಗವನ್ನು ಮೂಲೆ ಗುಂಪಾಗಿಸುವ ಪ್ರಯತ್ನವಾಗಿದೆ.

ದೈವಾರಾಧನೆಗೆ ಇಂತದ್ದೇ ಜಾತಿ ಜನಾಂಗದವರು ನಡೆಸುವಂತಹ ಕಟ್ಟುಪಾಡುಗಳಿವೆ. ಅದನ್ನು ಮೀರಿ ಇನ್ನಿತರು ಮಾಡುವಂತಿಲ್ಲ. ಆದರೆ ಈಗ ಇದೊಂದು ಛದ್ಮವೇಷದಂತೆ ಪ್ರತಿಯೊಬ್ಬರು ವೇಷ ಹಾಕಿಕೊಂಡು ಹಣ ಮಾಡುತ್ತಿದ್ದಾರೆ. ಮತ್ತು ದೈವರಾಧನೆಯನ್ನು ನಿಂದಿಸುತ್ತಿದ್ದಾರೆ. ಸಾರ್ವಜನಿಕವಾಗಿ ದೈವದ ವೇಭೂಷಣ ತೊಟ್ಟು ಅಣಕಿಸುವ ಪ್ರದರ್ಶನ ನೀಡುವುದರಿಂದ ಇತರ ಸಮುದಾಯದವರೂ ಕೂಡಾ ಇದರಿಂದ ಪ್ರೇರಣೆ ಪಡೆದು ಪರಂಪರೆ ಒಪ್ಪಿತವಲ್ಲದ ಸಮುದಾಯಗಳು ದೈವ ನರ್ತನ ಮಾಡುವ ಪ್ರಸಂಗ ಕಂಡು ಬರುತ್ತಿದೆ. ಇದರಿಂದ ಮೂಲ ಕಸುಬುದಾರಿಗೂ ಅನ್ಯಾಯವಾಗುತ್ತಿದೆ.
ದೈವಕೋಲ ಕಟ್ಟುವ ಜನಾಂಗವು ಪರಿಶಿಷ್ಟ ವರ್ಗದವರು ಆಗಿರುವುದರಿಂದ ಸದರಿ ಆರೋಪಿಗಳ ವಿರುದ್ಧ ದಲಿತ ದೌರ್ಜ್ಯನ್ಯ ಪ್ರಕರಣ, ಜನಾಂಗೀಯ ನಿಂದನೆ ಜೊತೆ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅಪಚಾರಗಳನ್ನು ಅವಮಾನಿಸಿದ ಬಗ್ಗೆ ಪ್ರಕರಣ ದಾಖಲಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಸಿನಿಮಾ, ನಾಟಕ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೈವದ ವಿಡಂಬನೆಯಾದಲ್ಲಿ ಕಾನೂನಿನ ಮೂಲಕವೇ ಹೋರಾಡುವ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ದೂರು ದಾಖಲಿಸಿದ್ದಾರೆ.












Click it and Unblock the Notifications