ಮಂಗಳೂರಿನಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ
ಮಂಗಳೂರು, ಮೇ.23: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮೇ 26ರಿಂದ 29 ರವರೆಗೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಭರ್ಜರಿ ಪೂರ್ವ ತಯಾರಿ ನಡೆದು, ಅಂತಿಮ ಹಂತದ ಕಾರ್ಯ ಪ್ರಗತಿಯಲ್ಲಿದೆ.
ನಗರದೆಲ್ಲೆಡೆ ಈಗಾಗಲೇ ಗೋಡೆ ಬರಹ ಕಾರ್ಯ ಪ್ರಗತಿಯಲ್ಲಿದ್ದು, ಸ್ವಾಗತ ಕಮಾನು, ಬ್ಯಾನರ್‍ಗಳನ್ನು ಹಾಕುವ ಕಾರ್ಯ ಇಂದಿನಿಂದ ಆರಂಭವಾಗಲಿದೆ.ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭಕ್ಕೆ ಪೂರ್ವದಲ್ಲಿ ಮೇ 24ರಂದು ಕೇಂದ್ರೀಯ ಟೀಂ ಬೈಠಕ್, ಮೇ 25 ರಂದು ಕೇಂದ್ರೀಯ ಸಮಿತಿ ಸಭೆ ಕೂಡ ನಡೆಯಲಿದೆ.
ದೇಶದ ಶೈಕ್ಷಣಿಕ ಸಮಸ್ಯೆಗಳು, ಶಿಕ್ಷಣ ಸುಧಾರಣೆ, ವಿದ್ಯಾರ್ಥಿ ಪರಿಷತ್‍ನ ಸಂಘಟನಾತ್ಮಕ ವಿಚಾರದ ಬಗ್ಗೆ ಮಹತ್ವಪೂರ್ಣ ನಿರ್ಣಯಗಳು ಈ ಸಭೆಯಲ್ಲಿ ಮಾಡಲಾಗುವುದು. ಪ್ರತಿನಿಧಿಗಳ ವಸತಿ, ಭೋಜನ, ಸಾರ್ವಜನಿಕ ಸಭೆ, ಪ್ರಚಾರ ಮುಂತಾದ 40 ಸಮಿತಿಗಳನ್ನು ಮಾಡಲಾಗಿದ್ದು, ಈಗಾಗಲೇ 100ಕ್ಕೂ ಅಧಿಕ ಕಾರ್ಯಕರ್ತರು ಸಭೆಯ ಯಶಸ್ಸಿಗೆ ನಿರಂತರ ಕಾರ್ಯ ನಿರತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾ ಪ್ರತಿನಿಧಿಗಳು, ಕಾರ್ಯದರ್ಶಿಗಳು, ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು ಸೇರಿದಂತೆ ದೇಶದೆಲ್ಲೆಡೆಯಿಂದ ಸುಮಾರು 364 ಪ್ರತಿನಿಧಿಗಳು ಬರುವ ನಿರೀಕ್ಷೆಯಿದೆ. ಇದಲ್ಲದೆ ವರ್ಲ್ಡ್ ಆರ್ಗನೈಜೇಷನ್ ಆಫ್ ಸ್ಟೂಡೆಂಟ್ಸ್ ಅಂಡ್ ಯೂಥ್ಸ್ (WOSY) ಪ್ರಾಜ್ಞಿಕ್ ವಿದ್ಯಾರ್ಥಿ ಪರಿಷತ್(ಪಿವಿಪಿ) ನೇಪಾಳದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಎಬಿವಿಪಿ ರಾಷ್ತ್ರೀಯ ಅಧ್ಯಕ್ಷ ಪಿ ಮುರಳಿ ಮನೋಹರ್ ಹಾಗೂ ಪ್ರಧಾನ ಕಾರ್ಯದರ್ಶಿ ಶೇಷಾದ್ರಿ ಬೊರಿಕಾರ್ ಅವರು ಮೇ. 26 ರಂದು ಸಭೆಯನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಉಚ್ಚಾತರ್ ಶಿಕ್ಷ ಅಭಿಯಾನ್(RUSA) ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಗುತ್ತದೆ. ಪದವಿ ಪರೀಕ್ಷೆಗಳನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸುವ ಪ್ರಸಾವನೆ ಬಗ್ಗೆ ಕೂಡಾ ಚರ್ಚೆ ನಡೆಯಲಿದೆ.ಮೇ.28ರಂದು ನವಭಾರತ್ ಸರ್ಕಲ್ ಟಿವಿ ರಾಮನ್ ಪೈ ಹಾಲ್ ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಎಬಿವಿಪಿ ಪ್ರಕಟಿಸಿದೆ.












Click it and Unblock the Notifications